ಕಾಂಗ್ರೆಸ್‌ಗೆ ಬಿಸಿತುಪ್ಪವಾದ ಸರ್ವಪಕ್ಷ ಸಭೆ..!

ಬೆಂಗಳೂರು, ಏ.14- ಕೊರೊನಾ ನಿಯಂತ್ರಣ, ಸಾರಿಗೆ ಮುಷ್ಕರ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ಆಯೋಜಿಸಿರುವ ಸರ್ವಪಕ್ಷಗಳ ಸಭೆಯಲ್ಲಿ ಭಾಗವಹಿಸಬೇಕೆ, ಬೇಡವೇ ಎಂಬ ಬಗ್ಗೆ ಕಾಂಗ್ರೆಸ್‍ನಲ್ಲಿ ಗೊಂದಲ ಉಂಟಾಗಿದೆ. ಸರ್ಕಾರದ ಸಭೆಯಲ್ಲಿ ಭಾಗವಹಿಸಬೇಕು. ನಮ್ಮ ನಿಲುವುಗಳನ್ನು ಸ್ಪಷ್ಟವಾಗಿ ಹೇಳಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಹಿರಿಯ ನಾಯಕರ ಅಭಿಪ್ರಾಯವಾಗಿದೆ.

ಆದರೆ, ಈ ಸಭೆಯಲ್ಲಿ ಭಾಗವಹಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಸರ್ಕಾರ ತನಗನ್ನಿಸಿದ್ದನ್ನೇ ಮಾಡುತ್ತದೆ. ನಾವು ಕೊಟ್ಟ ಸಲಹೆಗಳನ್ನು ಪರಿಗಣಿಸುವುದಿಲ್ಲ. ಮುಂದೆ ಏನಾದರು ಅನಾಹುತಗಳಾದರೆ ಸರ್ವಪಕ್ಷಗಳ ಅಭಿಪ್ರಾಯದಂತೆ ನಾವು ನಡೆದುಕೊಂಡಿದ್ದೇವೆ ಎಂದು ನಮ್ಮ ತಲೆಗೆ ಕಟ್ಟುವ ಪ್ರಯತ್ನ ಮಾಡುತ್ತಾರೆ. ಹೀಗಾಗಿ ಸಭೆಯಿಂದ ದೂರ ಉಳಿಯುವುದೇ ಒಳ್ಳೆಯದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವರು ಹೇಳುತ್ತಿದ್ದಾರೆ.

ಈ ನಡುವೆ ಕಾಂಗ್ರೆಸ್‍ಗೆ ಮತ್ತೊಂದು ಧರ್ಮಸಂಕಟ ಎದುರಾಗಿದೆ. ತಮ್ಮ ವಿರುದ್ಧ ಯಾವುದೇ ಮಾನಹಾನಿಕಾರಕ ಸುದ್ದಿಗಳನ್ನು ಪ್ರಕಟಿಸದಂತೆ ರಾಜ್ಯ ಸರ್ಕಾರದ ಆರು ಮಂದಿ ಸಚಿವರು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಆ ಆರು ಮಂದಿಗೆ ಯಾವುದೇ ಪ್ರಶ್ನೆಗಳನ್ನು ಕೇಳುವುದಿಲ್ಲ. ಅವರ ಇಲಾಖೆಗೆ ಸಂಬಂಧಪಟ್ಟಂತೆ ಯಾವುದೇ ಚರ್ಚೆ ಮಾಡುವುದಿಲ್ಲ ಎಂದು ವಿಧಾನಮಂಡದಲ್ಲಿ ಕಾಂಗ್ರೆಸ್ ಘೋಷಣೆ ಮಾಡಿದ್ದು, ಅದರಂತೆ ಕಲಾಪ ಮುಗಿಯುವವರೆಗೂ ಯಾವುದೇ ಪ್ರಶ್ನೆ ಕೇಳದೆ ಆರು ಸಚಿವರ ಇಲಾಖೆಗಳನ್ನು ಬಹಿಷ್ಕರಿಸಿತ್ತು.

ಇದು ಸಚಿವರಿಗೆ ತೀವ್ರ ಮುಜುಗರ ಉಂಟು ಮಾಡಿತ್ತು. ಆ ಆರು ಮಂದಿ ಸಚಿವರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್ ಕೂಡ ಇದ್ದಾರೆ. ಈಗ ಕಾಂಗ್ರೆಸ್ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದರೆ ಇಲಾಖೆ ಬಗ್ಗೆ ಮಾತನಾಡಬೇಕಾಗುತ್ತದೆ. ಸುಧಾಕರ್ ಅವರಿಗೆ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ. ಅವರು ನೀಡುವ ಉತ್ತರವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ವಿಧಾನಮಂಡಲದಲ್ಲಿ ಬಹಿಷ್ಕಾರ ಮಾಡಿ ಸರ್ವಪಕ್ಷ ಸಭೆಯಲ್ಲಿ ಅವರೊಂದಿಗೆ ಚರ್ಚೆ ಮಾಡುವುದು ಸಾಧುವೆ ಎಂಬ ಜಿಜ್ಞಾಸೆ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದೆ.

ಹೀಗಾಗಿ ಕೆಲವು ನಾಯಕರು ಸರ್ವಪಕ್ಷ ಸಭೆಯನ್ನು ಬಹಿಷ್ಕರಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಇಲ್ಲಿ ಜನರ ಜೀವ, ಜೀವನದ ಪ್ರಶ್ನೆ ಇದೆ. ನಾವು ಸಚಿವರ ಜತೆ ಮಾತನಾಡುವ ಬದಲಾಗಿ ನೇರವಾಗಿ ಮುಖ್ಯಮಂತ್ರಿ, ಆರೋಗ್ಯ ಇಲಾಖೆಯ ಅಧಿಕಾರಿಗಳ ಜತೆ ಚರ್ಚೆ ಮಾಡುವ ಮೂಲಕ ಸಚಿವರನ್ನು ಬಹಿಷ್ಕರಿಸಿ ಸರ್ವ ಪಕ್ಷ ಸಭೆಯಲ್ಲೂ ಮುಜುಗರ ಉಂಟು ಮಾಡಬೇಕೆಂಬ ಸಲಹೆಯನ್ನು ಕೆಲವು ನಾಯಕರು ಮುಂದಿಟ್ಟಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಏ.18ರಂದು ನಿಗದಿ ಮಾಡಿರುವ ಸರ್ವಪಕ್ಷ ಸಭೆ ಕುತೂಹಲ ಕೆರಳಿಸಿದೆ.