ಬೆಂಗಳೂರು, ಫೆ.25- ಅಪ್ಪು ಬಗ್ಗೆ ತಿಳಿಯಬೇಕಾದರೆ ಮೊದಲು ರಾಜ್‍ಕುಮಾರ್ ಬಗ್ಗೆ ತಿಳಿಯಬೇಕು. ಅವರ ಆದರ್ಶವನ್ನು ಅರ್ಥ ಮಾಡಿಕೊಂಡರೆ ಕನ್ನಡ ಚಿತ್ರರಂಗದ ಬಗ್ಗೆ ಅರ್ಥವಾಗುತ್ತದೆ ಎಂದು ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ತಿಳಿಸಿದರು.
ಕನ್ನಡ ಜನಶಕ್ತಿ ಕೇಂದ್ರ ಹಮ್ಮಿಕೊಂಡಿದ್ದ ಅಮರಶ್ರೀ ಅಪ್ಪು ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಡಾ.ರಾಜ್ ಕುಮಾರ್ ಅವರು ಇಡೀ ಸಮಾಜಕ್ಕೆ ಆದರ್ಶ. ಅವರ ಬಗ್ಗೆ ತಿಳಿಯುವುದು ಸಾಕಷ್ಟಿದೆ. ಪುನೀತ್ ರಾಜಕುಮಾರ್‍ಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂದು ಅನೇಕರು ಮಾತನಾಡುತ್ತಿದ್ದಾಗ ಶಿವರಾಜ್ ಕುಮಾರ್ ಅವರು ಪದ್ಮ ಶ್ರೀ ಇತ್ಯಾದಿ ಪ್ರಶಸ್ತಿಗಳು ಏಕೆ, ನಮ್ಮ ಅಪ್ಪು ಅಮರಶ್ರೀ ಎಂದು ಹೇಳಿದರು. ಆ ಪದವನ್ನೇ ಈ ಕೃತಿಗೆ ಇಡಲಾಗಿದೆ ಎಂದರು.
ಕೃತಿಯಲ್ಲಿ ಪತ್ರಕರ್ತರ ಲೇಖನಗಳು, ರಾಜಕೀಯ ನಾಯಕರ ಪ್ರತಿಕ್ರಿಯೆಗಳು ಸಹ ನಟರು ಮತ್ತು ಕನ್ನಡದ ಮನಸ್ಸುಗಳಿಂದ ಬಂದ ಪ್ರತಿಕ್ರಿಯೆಗಳ ಅಪೂರ್ವ ದಾಖಲೆಯನ್ನು ವಿನಯ್ ರಾಮೇಗೌಡ ಅವರು ನೀಡಿದ್ದಾರೆ. ಇದನ್ನು ಪ್ರಕಟಿಸುತ್ತಿರುವ ಸಿ.ಕೆ.ರಾಮೇಗೌಡ ಅವರಿಗೆ ಮತ್ತು ಕೃತಿಗೆ ಮುನ್ನುಡಿ ಬರೆದಿರುವ ಸಾ.ರಾ.ಗೋವಿಂದು ಅವರಿಗೆ ಅಭಿನಂದನೆಗಳು ಎಂದರು.
ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ರಾಜ್ ಕುಮಾರ್ ಕುಟುಂಬ ಕನ್ನಡ ಚಿತ್ರ ರಂಗದ ದೊಡ್ಮನೆ ಇದ್ದಂತೆ. ನಾಡು-ನುಡಿ ಹೋರಾಟ ದಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ಗೋಕಾಕ್ ಚಳವಳಿಯಲ್ಲಿ ಡಾ.ರಾಜ್‍ಕುಮಾರ್ ಹೋರಾಟ ನಮಗೆ ಸೂರ್ತಿಯಾಗಿದೆ.
ಅಪ್ಪುವನ್ನು ನೀವು ಚಿತ್ರಗಳನ್ನು ನೋಡಿ ಮೆಚ್ಚಿಕೊಂಡಿದ್ದೀರಿ. ಆದರೆ, ನಾನು ಕಳೆದ 46 ವರ್ಷಗಳಿಂದ ಬಹಳ ಹತ್ತಿರ ದಿಂದ ನೋಡಿದ್ದೇನೆ. ರಾಜ್‍ಕುಮಾರ್ ಅವರ ಆದರ್ಶಗಳನ್ನು ಪಾಲಿಸಿಕೊಂಡು ಬಂದಿದ್ದ. ಅವನ ನೆನಪು ಇಂದಿಗೂ ಅಮರ ಎಂದರು.
ನಟ ರಾಘವೇಂದ್ರ ರಾಜ್‍ಕುಮಾರ್, ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ, ಕೃತಿ ಸಂಪಾದಕರು ವಿನಯ್ ರಾಮೇಗೌಡ ಮತ್ತಿತರರು ಈ ಸಂದರ್ಭದಲ್ಲಿದ್ದರು.
