ಆಂಧ್ರ ಪ್ರದೇಶ, ಮಾ.3- ಅಮರಾವತಿಯೇ ಆಂಧ್ರ ಪ್ರದೇಶದ ರಾಜಧಾನಿ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡುವ ಮೂಲಕ ಆಂಧ್ರ ಪ್ರದೇಶದ ರಾಜಧಾನಿ ವಿಷಯದಲ್ಲಿ ನಡೆಯುತ್ತಿದ್ದ ಹಗ್ಗ-ಜಗ್ಗಾಟಕ್ಕೆ ತೆರೆ ಎಳೆದಿದೆ. ಒಂದು ರಾಜ್ಯಕ್ಕೆ ಮೂರು ರಾಜಧಾನಿಗಳಿರುವುದು ಸಾಧ್ಯವಿಲ್ಲ ಎಂದು ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗಮೋಹನ್ ರೆಡ್ಡಿ ಅವರ ಮೂರು ರಾಜಧಾನಿ ಕಲ್ಪನೆಯನ್ನು ಕೈಬಿಟ್ಟಿರುವ ಆಂಧ್ರ ಹೈಕೋರ್ಟ್ ಅಮರಾವತಿಯನ್ನೇ ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸಿ ಎಂದು ಸೂಚನೆ ನೀಡಿದೆ.
ಮೂರು ರಾಜಧಾನಿ ಮತ್ತು ಸಿಆರ್‍ಡಿಪಿ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಪೀಠ ಸಿಆರ್‍ಡಿಪಿ ಕಾಯ್ದೆ ಪ್ರಕಾರವೇ ಸರ್ಕಾರ ಆಡಳಿತ ನಡೆಸಬೇಕು. ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಆರು ತಿಂಗಳಲ್ಲಿ ಅಮರಾವತಿ ಅಭಿವೃದ್ಧಿಗೊಳಿಸಬೇಕು ಮತ್ತು ಭೂಮಿ ನೀಡಿದ ರೈತರಿಗೆ ಮೂರು ತಿಂಗಳಲ್ಲಿ ಪರ್ಯಾಯ ಭೂಮಿ ನೀಡಬೇಕು ಎಂದು ಸರ್ಕಾರಕ್ಕೆ ತಾಕೀತು ಮಾಡಿದೆ.
ಅಮರಾವತಿ ರಾಜಧಾನಿ ಮಾಡಲು ಭೂಮಿ ನೀಡಿದ ರೈತರಿಗೆ ಮೂಲ ಸೌಕರ್ಯ ಒದಗಿಸಿ ನಿವೇಶನಗಳನ್ನು ನೀಡುವುದು, ಅೀಧಿನಕ್ಕೆ ಪಡೆದ ಭೂಮಿಯನ್ನು ರಾಜಧಾನಿ ಅಭಿವೃದ್ಧಿಗೆ ಮಾತ್ರ ಬಳಕೆ ಮಾಡಬೇಕು. ಇತರೆ ಕಾರಣಗಳಿಗೆ ಉಪಯೋಗಿಸುವಂತಿಲ್ಲ. ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕೋರ್ಟ್‍ಗೆ ಕಾಲಕಾಲಕ್ಕೆ ಮಾಹಿತಿ ನೀಡಬೇಕು ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಅಮರಾವತಿ ರಾಜಧಾನಿಗಾಗಿ ಈ ಹಿಂದೆಯೇ ರೂಪಿಸಿದ ಯೋಜನೆಯನ್ನು ಮುಂದುವರಿಸಬೇಕು. ರಾಜಧಾನಿ ವಿಚಾರದಲ್ಲಿ ನಿರ್ಣಯ ಕೈಗೊಳ್ಳುವ ಅಕಾರ ಶಾಸಕಾಂಗಕ್ಕೆ ಇಲ್ಲ. ಸಿಆರ್‍ಡಿಪಿ ಕಾಯ್ದೆ ಪ್ರಕಾರವೇ ಸರ್ಕಾರ ಆಡಳಿತ ನಡೆಸಬೇಕು ಎಂದು ಹೇಳಿದೆ.
