ಜಮ್ಮು,ಜು.11- ಮೇಘಸ್ಫೋಟದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನಾರಾಂಭಗೊಂಡಿದೆ. ಬೆಳಗ್ಗೆ ನುನ್ವಾನ ಪಹಾಲ್‍ಗಾಮ್ ಕಡೆಯಿಂದ ಅಮರನಾಥ ಯಾತ್ರೆಯನ್ನು ಆರಂಭಿಸಲಾಗಿದೆ ಎಂದು ಅಮರನಾಥ ಕ್ಷೇತ್ರ ಆಡಳಿತ ಮಂಡಳಿ ತಿಳಿಸಿದೆ.
ಬಲ್ವಾಲ ಬೇಸ್ ಕ್ಯಾಂಪ್‍ನಲ್ಲಿ ಕಾಯುತ್ತಿದ್ದ ಯಾತ್ರಾರ್ಥಿಗಳು ಇಂದು ಯಾತ್ರೆ ಪ್ರಾರಂಭಿಸಿದ್ದಾರೆ. ಪ್ರತಿಕೂಲ ಪರಿಸ್ಥಿತಿಯಿಂದ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇಂದಿನಿಂದ ಯಾತ್ರೆ ಪುನಾರಂಭವಾಗಿದ್ದು, ಜಮ್ಮುವಿನ ಮೂಲ ಶಿಬಿರದಿಂದ 4,020 ಯಾತ್ರಿಕರ ತಂಡ ಯಾತ್ರೆ ಪ್ರಾರಂಭಿಸಿದೆ.
ಜು.8ರಂದು ಅಮರನಾಥ ಗುಹೆಯ ಸಮೀಪ ಮೇಘ ಸ್ಪೋಟದಿಂದ ದಿಢೀರ್ ಪ್ರವಾಹ ಉಂಟಾಗಿ ಶಿಬಿರಗಳಲ್ಲಿ ತಂಗಿದ್ದ 16 ಯಾತ್ರಿಕರು ಮೃತಪಟ್ಟು 40 ಯಾತ್ರಿಕರು ನಾಪತ್ತೆಯಾಗಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ 15 ಸಾವಿರ ಯಾತ್ರಿಕರನ್ನು ಸೇನಾ ಕಾರ್ಯಚರಣೆ ಮೂಲಕ ಸ್ಥಳಾಂತರ ಮಾಡಲಾಗಿತ್ತು. ನಾಪತ್ತೆಯಾದ ಯಾತ್ರಿಕರ ಪತ್ತೆಗೆ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ. ಅಂದಿನಿಂದ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು.
ನಾಪತ್ತೆಯಾದ ಯಾತ್ರಿಕರ ಶೋಧ ಕಾರ್ಯ ಮುಂದುವರೆದಿದ್ದು, ಇದಕ್ಕೂ ಮುನ್ನ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗೌರ್ನರ್ ಮನೋಜ್ ಸಿನ್ಹಾ ಪಹಲ್‍ಗಾಮ್‍ನಲ್ಲಿರುವ ಬೇಸ್ ಕ್ಯಾಂಪ್‍ಗೆ ಭೇಟಿ ನೀಡಿ ಯಾತ್ರಾರ್ಥಿಗಳನ್ನು ಭೇಟಿ ಮಾಡಿದರು.
ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ನಾವು ಮೃತಪಟ್ಟವರಿಗೆ ಸಂತಾಪ ಸೂಚಿಸುತ್ತೇವೆ ಮಾರ್ಗವನ್ನು ಸರಿಪಿಸುವ ಜೊತೆಗೆ ಯಾತ್ರೆಯನ್ನು ಪುನರಾರಂಭಿಸುವ ಪ್ರಯತ್ನಗಳು ನಡೆಯುತ್ತಿವೆ. ಯಾತ್ರಾರ್ಥಿಗಳಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದು ಸಿನ್ಹಾ ಭರವಸೆ ನೀಡಿದ್ದಾರೆ.