ಅಂಬಿ ಫೌಂಡೇಷನ್ ಟ್ರಸ್ಟ್ ಸ್ಥಾಪನೆಗೆ ಚಿಂತನೆ : ಸುಮಲತಾ ಅಂಬರೀಶ್

Spread the love

ಬೆಂಗಳೂರು,ನ.24- ಅಂಬರೀಶ್ ಅವರ ಕನಸುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಡಾ.ಅಂಬರೀಶ್ ಫೌಂಡೇಷನ್ ಟ್ರಸ್ಟ್ ಸ್ಥಾಪಿಸುತ್ತಿರುವುದಾಗಿ ಸಂಸದೆ ಸುಮಲತಾ ತಿಳಿಸಿದ್ದಾರೆ. ಅಂಬರೀಶ್ ಅವರ 3ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಕಂಠೀರವ ಸ್ಟುಡಿಯೋಗೆ ಪುತ್ರ ಅಭಿಷೇಕ್ ಜೊತೆಯಲ್ಲಿ ಆಗಮಿಸಿದ ಸುಮಲತಾ ಅವರು, ಅಂಬರೀಶ್ ಅವರ ಸಮಾಗೆ ಗೌರವ ನಮನ ಸಲ್ಲಿಸಿದ ಬಳಿಕ ವರನಟ ರಾಜ್‍ಕುಮಾರ್, ನಿಮಾರ್ಪಕಿ ಪಾರ್ವತಮ್ಮ ರಾಜಕುಮಾರ್, ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಸಮಾಗೂ ಸುಮಲತ ಪುಷ್ಪ ನಮನ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಭಾಗದ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು, ಸಾಮಾಜಿಕ, ಕ್ರೀಡೆ, ವೈದ್ಯಕೀಯ ಕ್ಷೇತ್ರಗಳಿಗೆ ನೆರವು ನೀಡುವುದು ಸೇರಿದಂತೆ ಹಲವು ರಂಗಗಳಲ್ಲಿ ಫೌಂಡೇಷನ್ ಕೆಲಸ ಮಾಡಲಿದೆ ಎಂದು ಹೇಳಿದರು.

ಅಂಬರೀಶ್ ಅವರು ತಮ್ಮ ಜೀವಮಾನದಲ್ಲಿ ಸ್ವಾಭಿಮಾನಿಯಾಗಿ ಬದುಕಿದ್ದರು. ಯಾವುದಕ್ಕೂ ಯಾರ ಬಳಿಯೂ ಕೈ ಚಾಚಿರಲಿಲ್ಲ. ಶಾಸಕರಾಗಲು, ಸಂಸದರಾಗಲು, ಸಚಿವರಾಗಲು ಯಾರ ಮನೆ ಅಥವಾ ಕಚೇರಿಗೂ ಹೋಗಲಿಲ್ಲ. ನನಗೆ ಈ ರೀತಿಯ ಪ್ರಶಸ್ತಿ ಬೇಕು ಎಂದು ಯಾರ ಬಳಿಯೂ ಕೇಳಿಲ್ಲ. ಅಭಿಮಾನಿಗಳು ಅಂಬರೀಶ್ ಅವರ ಸ್ವಾಭಿಮಾನವನ್ನು ಗೌರವಿಸಿ ಅವರ ಹಾದಿಯಲ್ಲೇ ಮುನ್ನಡೆಯಬೇಕು. ಅಂಬರೀಶ್ ಅವರಿಗೆ ಸೂಕ್ತ ಗೌರವ ಸಿಕ್ಕಿಲ್ಲ ಎಂದು ಪ್ರತಿಭಟನೆ ನಡೆಸುವ ಮಾತುಗಳನ್ನಾಡಬಾರದು.

ಪವರ್ ಸ್ಟಾರ್ ಪುನೀತ್ ಅವರ ಅಗಲಿಕೆಯಿಂದ ಜನ ನೋವಿನಲ್ಲಿದ್ದಾರೆ. ಈ ಸಂದರ್ಭದಲ್ಲಿ ಹೋರಾಟ ಮಾಡುವುದು ಸೂಕ್ತವಲ್ಲ ಎಂದು ಅಭಿಮಾನಿಗಳಿಗೆ ತಿಳಿಹೇಳಿದ್ದೇನೆ. ಪುನೀತ್‍ಗೆ ಕರ್ನಾಟಕ ರತ್ನ ಸಿಕ್ಕರೆ ಅದು ಅಂಬರೀಶ್‍ಗೆ ಸಿಕ್ಕಂತೆ ಎಂದು ಸುಮಲತಾ ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅಂಬರೀಶ್ ಅವರು ಸುಮಾರು 40 ವರ್ಷಗಳ ಕಾಲ ಉತ್ತಮ ಸ್ನೇಹಿತರಾಗಿದ್ದರು. ಅಂಬರೀಶ್ ಅವರಿಗೆ ಸೂಕ್ತ ಗೌರವ ಅಥವಾ ಮನ್ನಣೆ ನೀಡುವುದು ಮುಖ್ಯಮಂತ್ರಿಗಳ ಗಮನದಲ್ಲಿದೆ ಎಂದರು.

ಕೆ.ಆರ್.ಎಸ್ ಸುತ್ತಮುತ್ತ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಈಗ ಸ್ಥಗಿತಗೊಂಡಿದೆ. ಮಂಡ್ಯದ ವಿಧಾನಪರಿಷತ್ ಚುನಾವಣೆಯಲ್ಲಿ ತಮ್ಮ ಬೆಂಬಲ ಯಾರಿಗೆ ಎಂದು ತಾವು ಹೇಳುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳು ನನಗೆ ಬೆಂಬಲ ನೀಡಿವೆ. ಈಗ ಒಂದೇ ಪಕ್ಷವನ್ನು ಬೆಂಬಲಿಸುವುದರಿಂದ ಬಹಳಷ್ಟು ಮಂದಿಗೆ ನೋವಾಗುತ್ತದೆ.

ಮಂಡ್ಯ ಜಿಲ್ಲೆಗೆ ಯಾರು ಒಳ್ಳೆಯ ಕೆಲಸ ಮಾಡುತ್ತಾರೋ ಅವರಿಗೆ ನನ್ನ ಬೆಂಬಲ ಎಂದು ಸುಮಲತಾ ಹೇಳಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಗೋಪಾಲಯ್ಯ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಅಂಬರೀಶ್ ಅವರ ಸ್ಮಾರಕಕ್ಕೆ 4.75 ಕೋಟಿ ರೂ. ಅನುದಾನ ನೀಡಿದ್ದರು.

ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅಂಗೀಕಾರ ಪಡೆದು ಎಲ್ಲರ ಜೊತೆ ಚರ್ಚಿಸಿ ನಿರೀಕ್ಷೆಗಿಂತಲೂ ಉತ್ತಮವಾಗಿ ಸ್ಮಾರಕ ನಿರ್ಮಿಸುವುದಾಗಿ ಭರವಸೆ ನೀಡಿದರು. ನಟ ಹಾಗೂ ಪುತ್ರ ಅಭಿಷೇಕ್ ಅಂಬರೀಶ್ ಈ ಸಂದರ್ಭದಲ್ಲಿ ಹಾಜರಿದ್ದರು.

Facebook Comments