ಹೃದಯಾಘಾತದಿಂದ ಮೃತಪಟ್ಟ ಆ್ಯಂಬುಲೆನ್ಸ್ ಚಾಲಕನ ಕುಟುಂಬಕ್ಕೆ ಸಿಎಂ ಸಾಂತ್ವಾನ

Spread the love

ಬೆಂಗಳೂರು, ಜೂ.1- ಹೃದಯಾಘಾತದಿಂದ ಇಂದು ಮುಂಜಾನೆ ನಿಧನರಾದ ಆ್ಯಂಬುಲೆನ್ಸ್ ಚಾಲಕ ಉಮೇಶ್ ಫಕೀರಪ್ಪ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೂರವಾಣಿ ಕರೆ ಮಾಡಿ ಸಾಂತ್ವಾನ ಹೇಳಿ ಸರ್ಕಾರದಿಂದ ನೆರವು ನೀಡುವ ಭರವಸೆ ನೀಡಿದ್ದಾರೆ.

ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಕಣ್ಣೂರು ಗ್ರಾಮದ ಉಮೇಶ್ ಫಕೀರಪ್ಪ 108 ಆ್ಯಂಬುಲೆನ್ಸ್ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ಬೆಳಗ್ಗೆ ಇದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ತಕ್ಷಣವೇ ಅವರನ್ನು ಬೆಳಗಾವಿ ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿತ್ತು.

ಆದರೆ ದುರದೃಷ್ಟವಶಾತ್ ಮಾರ್ಗಮಧ್ಯೆದಲ್ಲಿಯೇ ಅವರಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಉಮೇಶ್ ಫಕೀರಪ್ಪ ಅವರ ಪತ್ನಿಗೆ ದೂರವಾಣಿ ಕರೆ ಮಾಡಿದ ಯಡಿಯೂರಪ್ಪ ಸಾಂತ್ವಾನ ಹೇಳಿದರು.

ಮೃತ ಉಮೇಶ್ ಫಕೀರಪ್ಪ , ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಾರಣ ಅವರಿಗೆ ಸರ್ಕಾರದಿಂದ ಅಗತ್ಯ ನೆರವು ನೀಡುವ ಭರವಸೆ ಕೊಡಲಾಗಿದೆ.  ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದ್ದು, ವಿಮೆ( ಇನ್ಸುರೆನ್ಸ್) ಇದ್ದರೆ ನೆರವು ಸಿಗಲಿದೆ. ಜೊತೆಗೆ ಸರ್ಕಾರದ ವತಿಯಿಂದ ಏನೇನು ನೀಡಲು ಸಾಧ್ಯವಿದೆಯೋ ಎಲ್ಲವನ್ನೂ ಒದಗಿಸಲಾಗುವುದು. ನೀವು ಧೃತಿಗೆಡಬಾರದೆಂದು ಮೃತರ ಕುಟುಂಬಕ್ಕೆ ಯಡಿಯೂರಪ್ಪ ಧೈರ್ಯ ತುಂಬಿದ್ದಾರೆ.

Facebook Comments