ಎಚ್‍ಎಎಲ್‍ನ ಸಿಬ್ಬಂದಿ ಜೊತೆ ರಾಹುಲ್ ಸಂವಾದ

Spread the love

Rahul-And-Kumaraswamy--02

ಬೆಂಗಳೂರು, ಅ.13- ರಫೇಲ್ ಯುದ್ಧ ವಿಮಾನ ಖರೀದಿಯ ಬಗ್ಗೆ ಗಂಭೀರ ಸ್ವರೂಪದ ಹೋರಾಟಕ್ಕೆ ಮುಂದಾಗಿರುವ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಇಂದು ಬೆಂಗಳೂರಿಗೆ ಆಗಮಿಸಿ ಎಚ್‍ಎಎಲ್‍ನ ಸಿಬ್ಬಂದಿ ಮತ್ತು ಅಧಿಕಾರಿ ವರ್ಗದ ಜತೆ ಸಂವಾದ ನಡೆಸಿದ್ದಾರೆ. ಎಚ್‍ಎಎಲ್ ಸಂಸ್ಥೆಗೆ ಗುಣಮಟ್ಟದ ಯುದ್ಧ ವಿಮಾನಗಳನ್ನು ತಯಾರು ಮಾಡುವ ಸಾಮಥ್ರ್ಯ ಇಲ್ಲ ಎಂದು ಬಿಜೆಪಿ ಮತ್ತು ಕೇಂದ್ರ ಸಚಿವರು ಪದೇ ಪದೇ ವಾದಿಸುತ್ತಿದ್ದಾರೆ. ಹೀಗಾಗಿ ಎಚ್‍ಎಎಲ್‍ನ ಸಾಮಥ್ರ್ಯ ಅರಿತುಕೊಳ್ಳುವ ಸಲುವಾಗಿ ರಾಹುಲ್‍ಗಾಂಧಿ ನೇರವಾಗಿ ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಜತೆ ಸಮಾಲೋಚನೆಗೆ ಮುಂದಾದರು.

ಆರಂಭದಲ್ಲಿ ಎಚ್‍ಎಎಲ್‍ನ ಆವರಣದಲ್ಲೇ ರಾಹುಲ್‍ಗಾಂಧಿ ಅವರ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೊನೆಗೆ ಭದ್ರತಾ ದೃಷ್ಟಿಯಿಂದ ಅದನ್ನು ಬದಲಾವಣೆ ಮಾಡಿ ಕಬ್ಬನ್‍ಪಾರ್ಕ್ ಆವರಣದಲ್ಲಿ ಏರ್ಪಡಿಸಲಾಗಿತ್ತು. ಕಬ್ಬನ್‍ಪಾರ್ಕ್‍ನ ಮೆಟ್ರೋ ಸ್ಟೇಷನ್ ಮುಂಭಾಗದಲ್ಲಿರುವ ಜಾಗದಲ್ಲಿ ಸಂವಾದ ಕಾರ್ಯಕ್ರಮಕ್ಕೆ ವೇದಿಕೆ ಹಾಕಲಾಗಿತ್ತು.

Rahul--01

ಬಯಲು ಪ್ರದೇಶದಲ್ಲಿ ನಿರ್ಮಿಸಲಾದ ವೇದಿಕೆಯಲ್ಲಿ ರಾಹುಲ್‍ಗಾಂಧಿ ಸುಮಾರು 150ಕ್ಕೂ ಹೆಚ್ಚು ಎಚ್‍ಎಎಲ್‍ನ ಅಧಿಕಾರಿ ಮತ್ತು ಸಿಬ್ಬಂದಿ ಜತೆ ಸಂವಾದ ನಡೆಸಿದರು. ಇಂದು ಮಧ್ಯಾಹ್ನ 1.55ಕ್ಕೆ ಬೆಂಗಳೂರಿಗೆ ಆಗಮಿಸಿದ ರಾಹುಲ್‍ಗಾಂಧಿ ಅವರು, 2.30ಕ್ಕೆ ಕುಮಾರಕೃಪಾದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ಕಾರ್ಯದರ್ಶಿಗಳ ಜತೆ ಮಾತುಕತೆ ನಡೆಸಿದರು.

Rahul-And-Kumaraswamy--01

ಲೋಕಸಭೆ ಉಪ ಚುನಾವಣೆಯ ತಯಾರಿ, ಸಮ್ಮಿಶ್ರ ಸರ್ಕಾರದ ರಾಜಕೀಯ ಬೆಳವಣಿಗೆಗಳು, ಸಚಿವ ಎನ್.ಮಹೇಶ್ ಅವರ ರಾಜೀನಾಮೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಸೇರಿದಂತೆ ಗಂಭೀರ ಸಮಾಲೋಚನೆ ನಡೆಸಲಾಯಿತು. ಸಂಜೆ 6 ಗಂಟೆಗೆ ರಾಹುಲ್‍ಗಾಂಧಿ ದೆಹಲಿಗೆ ವಾಪಸಾದರು. ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಬಹಿರಂಗ ಸಮಾವೇಶದಲ್ಲಿ ರಾಹುಲ್‍ಗಾಂಧಿ ಭಾಗವಹಿಸುವ ಸಾಧ್ಯತೆ ಇತ್ತು. ಆದರೆ, ಕೊನೆ ಕ್ಷಣದಲ್ಲಿ ಆ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.

Rahul--02

Facebook Comments