ಪಿಒಕೆ, ಅಕ್ಸಾಯಿಚಿನ್ ಪ್ರದೇಶಗಳೂ ಭಾರತದ ಭಾಗ : ಅಮಿತ್ ಷಾ

ನವದೆಹಲಿ, ಆ.6(ಪಿಟಿಐ)- ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಅಕ್ಸಾಯಿ ಚಿನ್ ಪ್ರದೇಶಗಳೂ ಕೂಡ ಜಮ್ಮು ಮತ್ತು ಕಾಶ್ಮೀರದ ಭಾಗ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಾದಿಸಿದ್ದಾರೆ. ಅಲ್ಲದೆ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಪುನರುಚ್ಚರಿಸಿದ್ದಾರೆ.

ಲೋಕಸಭೆಯಲ್ಲಿಂದು ಭಾರತೀಯ ಸಂವಿಧಾನದ 370ನೆ ವಿಧಿಯ ಕೆಲವು ನಿಯಮಗಳನ್ನು ರದ್ದುಗೊಳಿಸುವ ಹಾಗೂ ಜಮ್ಮು -ಕಾಶ್ಮೀರ ಪುನರ್ ಸಂಘಟನೆ ಮಸೂದೆ 2019 ಕುರಿತ ನಿರ್ಣಯ ಮಂಡಿಸಿ ಅಮಿತ್ ಶಾ ಮಾತನಾಡಿದರು.

ಜಮ್ಮು -ಕಾಶ್ಮೀರ ಪ್ರಾಂತ್ಯದ ಲಡಾಕ್‍ನನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕೆನ್ನುವುದು ಬಹು ವರ್ಷಗಳ ಬೇಡಿಕೆಯಾಗಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಇದನ್ನು ಸಾಕಾರಗೊಳಿಸಿದ್ದಾರೆ ಎಂದು ಗೃಹ ಸಚಿವರು ಹೇಳಿದರು. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಇದರಲ್ಲಿ ಯಾವುದೇ ಅನುಮಾನ ಇಲ್ಲ.

ಈ ವಿಷಯಕ್ಕೆ ಬಂದರೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಅಕ್ಸಾಯಿಚಿನ್ ಕೂಡ ನಮಗೆ ಸೇರಬೇಕು ಎಂದು ಅವರು ಹೇಳಿದರು.ಕಾಶ್ಮೀರ ಜನತೆಯ ಹಕ್ಕನ್ನು ಉಲ್ಲಂಘಿಸಿ ಪ್ರಾಂತ್ಯವನ್ನು ವಿಭಜನೆ ಮಾಡಲಾಗಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ತಳ್ಳಿ ಹಾಕಿದ ಅವರು ಇದರಲ್ಲಿ ಯಾವುದೇ ಕಾನೂನು ಅಥವಾ ನಿಯಮ ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಕೇಂದ್ರಾಡಳಿತ ಪ್ರದೇಶವಾಗ ಲಿರುವ ಜಮ್ಮು ಮತ್ತು ಕಾಶ್ಮೀರಕ್ಕೆ ಲೆಫ್ಟಿನೆಂಟ್ ಗೌರ್ನರ್ ಅವರನ್ನು ನೇಮಕ ಮಾಡಲಾಗುವುದು. ಮುಖ್ಯಮಂತ್ರಿ ಮತ್ತು ಶಾಸಕರು ಸಹ ಇದರಲ್ಲಿ ಇರುತ್ತಾರೆ ಎಂದು ಅಮಿತ್ ಶಾ ಸ್ಪಷ್ಟಪಡಿಸಿದರು.

ಇದಕ್ಕೂ ಮುನ್ನ ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌದರಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಜಮ್ಮು ಮತ್ತು ಕಾಶ್ಮೀರ ವಿಭಜನೆಯು ಕಾನೂನು ಬಾಹಿರ ಮತ್ತು ಅಕ್ರಮ. ಜನರ ಹಕ್ಕು ಮತ್ತು ಕಾನೂನನ್ನು ಉಲ್ಲಂಘಿಸಿ ಗೃಹ ಸಚಿವರು ಇದನ್ನು ವಿಭಜನೆ ಮಾಡಿದ್ದಾರೆ. ಜಮ್ಮು -ಕಾಶ್ಮೀರವನ್ನು ಬಯಲು ಬಂಧೀಖಾನೆ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.