ರೈತರ ಒಂದಿಂಚು ಬೂಮಿ ಕಬಳಿಸಲು ಬಿಡಲ್ಲ : ಗೃಹ ಸಚಿವ ಅಮಿತ್ ಷಾ

ನವದೆಹಲಿ,ಡಿ.25-ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಿಯಾಗಿ ಇರುವವರೆಗೆ ಯಾವುದೇ ಸಂಸ್ಥೆಗಳು ರೈತರ ಒಂದಿಂಚು ಭೂಮಿ ಕಬಳಿಸಲು ಬಿಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಘೋಷಿಸಿದರು. ಕಿಷನ್‍ಘರ್ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಮುಂದುವರೆಯಲಿದೆ, ಯಾವುದೇ ಕಾರಣಕ್ಕೂ ಮಂಡಿಗಳನ್ನು ಮುಚ್ಚುವುದಿಲ್ಲ ಎಂದು ಆಶ್ವಾಸನೆ ನೀಡಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕೃಷಿ ನೀತಿಯಲ್ಲಿ ರೈತ ವಿರೋಧಿ ನಿಲುವುಗಳಿದ್ದರೆ ಅವುಗಳನ್ನು ಬದಲಾವಣೆ ಮಾಡಲು ಮೋದಿ ಸರ್ಕಾರ ಮುಕ್ತ ಮನಸ್ಸಿನಿಂದ ಸಿದ್ದವಿದೆ ಎಂದು ಅವರು ಭರವಸೆ ನೀಡಿದರು. ಕೃಷಿ ನೀತಿ ಜಾರಿಗೆ ಬಂದರೆ ಬೆಂಬಲ ಬೆಲೆ ರದ್ದುಗೊಳಿಸಲಾಗುವುದು ಎಂದು ಕಾಂಗ್ರೆಸ್ ಸೇರಿದಂತೆ ಕೆಲವು ವಿರೋಧ ಪಕ್ಷಗಳು ರೈತರ ದಾರಿ ತಪ್ಪಿಸುತ್ತಿವೆ ಎಂದು ಅವರು ಇದೇ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ರೈತರ ಕಲ್ಯಾಣವೇ ನಮ್ಮ ಪ್ರಮುಖ ಆದ್ಯತೆ ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ಎಂಎಸ್ಪಿ ಮುಂದುವರೆಯಲಿದೆ, ಮಂಡಿಗಳನ್ನು ರದ್ದುಗೊಳಿಸುವುದಿಲ್ಲ. ನಮ್ಮ ಮಾತಿನ ಮೇಲೆ ನಂಬಿಕೆ ಇಡಿ ಎಂದು ಅವರು ಮನವಿ ಮಾಡಿಕೊಂಡರು.

ಇದೇ ಸಂದರ್ಭದಲ್ಲಿ ಪಂಜಾಬ್ ರೈತರು ತಮ್ಮ ಪ್ರತಿಭಟನೆ ಕೈಬಿಟ್ಟು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುವಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮನವಿ ಮಾಡಿಕೊಂಡಿದ್ದಾರೆ.