ಕಾಶ್ಮೀರದ ಭವಾನಿ ದೇವಸ್ಥಾನಕ್ಕೆ ಅಮಿತ್ ಶಾ ಭೇಟಿ

Spread the love

ಶ್ರೀನಗರ, ಅ.25- ಮೂರು ದಿನಗಳಿಂದ ಜಮ್ಮು-ಕಾಶ್ಮೀರದಲ್ಲಿ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಗಂದೇರ್ಬಲ್ ಜಿಲ್ಲೆಯ ಪೂಜ್ಯನಿಯ ಖೀರ್ ಭವಾನಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಕಾಶ್ಮೀರದ ಕೇಂದ್ರ ಭಾಗ ತುಲ್ಲಮುಲ್ಲಾ ಪ್ರದೇಶದಲ್ಲಿ ಚಿನಾರ್ ಮರಗಳ ನಡುವೆ ಇರುವ ದೇವಾಲಯಕ್ಕೆ ಸೋಮವಾರ ಬೆಳಗ್ಗೆ ಭೇಟಿ ನೀಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಂಪ್ರದಾಯಿಕ ಫೆರ್ಹಾನ್ ಉಡುಗೆ ಧರಿಸಿ ಮಾತೆ ರಗ್ನ್ಯಾ ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಕೇಂದ್ರ ಗೃಹ ಸಚಿವರೊಂದಿಗೆ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಜನರಲ್ ಮನೋಜ್ ಸಿನ್ಹಾ ಹಾಜರಿದ್ದರು.

ಮೂರು ದಿನಗಳ ಪ್ರವಾಸಕ್ಕಾಗಿ ಶನಿವಾರ ಕಾಶ್ಮೀರಕ್ಕೆ ಬಂದಿಳಿದ ಅಮಿತ್ ಶಾ, ಕಳೆದ ಜೂನ್‍ನಲ್ಲಿ ಉಗ್ರರ ದಾಳಿಯಿಂದ ಹತ್ಯೆಯಾದ ಪೊಲೀಸ್ ಅಧಿಕಾರಿ ಪರ್ವೇಝ್ ಅಹಮದ್ ಅವರ ಮನೆಗೆ ಮೊದಲು ಭೇಟಿ ನೀಡಿದ್ದರು. ನಂತರ ರಾಜಭವನದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಭದ್ರತಾ ವ್ಯವಸ್ಥೆಯ ಪರಿಶೀಲನೆ ನಡೆಸಿದರು.

ಹೊಸದಾಗಿ ರಚಿಸಲಾಗಿರುವ ಯೂತ್ ಕ್ಲಬ್‍ನ ಸದಸ್ಯರೊಂದಿಗೆ ಸಂಜೆ ಸಮಾಲೋಚನೆ ನಡೆಸಿದರು. ಭಾನುವಾರ ಜಮ್ಮುವಿನಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಇಂದು ಬೆಳಗ್ಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.