ರಾಜಕೀಯ ತಂತ್ರಗಾರಿಕೆಗಾಗಿ ರಾಜ್ಯ ನಾಯಕರ ಜತೆ ಅಮಿತ್ ಶಾ ಗೌಪ್ಯ ಸಭೆ

Social Share

ಬೆಂಗಳೂರು,ಆ.4- ಒಂದಿಲ್ಲೊಂದು ಕಾರಣಗಳಿಂದ ಮುಂದೂಡಲ್ಪಟ್ಟಿದ್ದ ಸಚಿವ ಸಂಪುಟ ವಿಸ್ತರಣೆ/ಪುನಾರಚನೆ ಹಾಗೂ ನಿಗಮ ಮಂಡಳಿ ನೇಮಕಾತಿ ಸೇರಿದಂತೆ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು
ರಾಜ್ಯ ನಾಯಕರ ಜತೆ ಮಹತ್ವದ ಮಾತುಕತೆ ನಡೆಸಿದ್ದಾರೆ.

ನಗರದ ಖಾಸಗಿ ಹೋಟೆಲ್‍ನಲ್ಲಿ ತಂಗಿದ್ದ ಅಮಿತ್ ಶಾ ಅವರ ಜತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವರು ಹಾಗೂ ಶಾಸಕರ ಜತೆ ಗೌಪ್ಯ ಸಮಾಲೋಚನೆ ನಡೆಸಿದ್ದಾರೆ.

ಮೊದಲು ಮಾಜಿ ಸಿಂಎ ಯಡಿಯೂರಪ್ಪ ಅವರ ಜತೆ 20 ನಿಮಿಷಗಳ ಕಾಲ ಮಾತುಕತೆ ನಡೆಸಿದ ಅಮಿತ್ ಶಾ, ಪಕ್ಷ ಸಂಘಟನೆ, ರಾಜ್ಯ ಪ್ರವಾಸ ಹಾಗೂ ಸಚಿವ ಸಂಪುಟ ವಿಸ್ತರಣೆ ಹಾಗೂ ಇತ್ತೀಚಿನ ಕೆಲವು ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ಜನ್ಮದಿನೋತ್ಸವದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶಿಸಿ ಪಕ್ಷವನ್ನು ಸಂಘಟಿಸುವತ್ತ ಕಾರ್ಯೋನ್ಮುಖವಾಗಿದೆ. ಅದೇ ರೀತಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಕಾರ್ಯತಂತ್ರ ರೂಪಿಸುವ ಬಗ್ಗೆಯೂ ಕೆಲವು ಸಲಹೆಗಳನ್ನು ನೀಡಿದ್ದಾರೆ ಎಂದು ಗೊತ್ತಾಗಿದೆ.

ಯಾವಾಗ ಸಚಿವ ಸಂಪುಟ ವಿಸ್ತರಣೆ/ಪುನಾರಚನೆ ಮಾಡಬೇಕು ಎಂಬುದನ್ನು ಪಕ್ಷ ಸೂಕ್ತ ಕಾಲದಲ್ಲಿ ತೀರ್ಮಾನಿಸುತ್ತದೆ. ಅದರ ಬಗ್ಗೆ ಯಾರೂ ಕೂಡ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಸಂಘಟನೆ ಹಾಗೂ ರಾಜ್ಯ ಪ್ರವಾಸದ ಬಗ್ಗೆ ಹೆಚ್ಚು ಗಮನ ಹರಿಸಬೇಕೆಂದು ಬಿಎಸ್‍ವೈ ಅವರಿಗೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಬರುವ ದಿನಗಳಲ್ಲಿ ರಾಜ್ಯ ಘಟಕದ ನಾಯಕರ ಜತೆ ರಾಜ್ಯಾದ್ಯಂತ ಪ್ರವಾಸವನ್ನು ಆರಂಭಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯಕ್ಕೆ ಆಹ್ವಾನಿಸಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆಸಬೇಕು. ಇದಕ್ಕೆ ಬೇಕಾದ ಸಿದ್ದತೆಗಳನ್ನು ಕೈಗೊಳ್ಳಿ ಎಂದು ಹೇಳಿದ್ದಾರೆ.

ಕಾರ್ಯಕರ್ತರನ್ನು ಕಡೆಗಣಿಸಬೇಡಿ:

ಯಡಿಯೂರಪ್ಪ ಭೇಟಿ ನಂತರ ಸಿಎಂ ಬೊಮ್ಮಾಯಿ ಅವರು ಅಮಿತ್ ಶಾ ಅವರ ಜತೆ ಆಗಮಿಸಿದರು. ಈ ವೇಳೆ ಅವರಿಗೆ ಸಚಿವರಾದ ಮುರುಗೇಶ್ ನಿರಾಣಿ, ಆರಗ ಜ್ಞಾನೇಂದ್ರ, ಮಾಜಿ ಸಚಿವ ಎಸ್.ಎ.ರಾಮದಾಸ್ ಹಾಗೂ ಸಿ.ಟಿ.ರವಿ ಸಾಥ್ ನೀಡಿದರು.

ಈ ನಾಲ್ವರ ಜತೆ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿ ಕಾರ್ಯಕರ್ತರನ್ನು ಕಡೆಗಣಿಸದಂತೆ ಅಮಿತ್ ಶಾ ಸೂಚನೆ ಕೊಟ್ಟಿದ್ದಾರೆ. ಬಿಜೆಪಿಗೆ ಕಾರ್ಯಕರ್ತರೇ ಆಧಾರ ಸ್ತಂಭ. ಮೊದಲ ಬಾರಿಗೆ ಕರ್ನಾಟಕದಲ್ಲಿ ಸ್ವಪಕ್ಷದ ವಿರುದ್ಧವೇ ನಮ್ಮ ಕಾರ್ಯಕರ್ತರು ತಿರುಗಿ ಬಿದ್ದಿದ್ದಾರೆ. ಇದು ಸರಿಯಾದ ಬೆಳವಣಿಗೆಯಲ್ಲ. ಕೂಡಲೇ ಕಾರ್ಯಕರ್ತರ ಮನವೊಲಿಸಿ ರಾಜೀನಾಮೆ ಹಿಂಪಡೆಯಲು ಸಂಧಾನ ನಡೆಸಬೇಕೆಂದು ಹೇಳಿದ್ದಾರೆ.

ಬಿಜೆಪಿ ಎಂದೆಂದಿಗೂ ಕಾರ್ಯಕರ್ತರನ್ನು ಮರೆಯುವ ಪಕ್ಷವಲ್ಲ. ಕೇವಲ ಎರಡು ಲೋಕಸಭೆ ಕ್ಷೇತ್ರದಿಂದ ಆರಂಭವಾದ ಜೈತ್ರಯಾತ್ರೆ ಇಂದು ಸತತ ಎರಡನೇ ಬಾರಿಗೆ ಅಕಾರ ಹಿಡಿದಿದ್ದೇವೆ. ಅನೇಕ ರಾಜ್ಯಗಳಲ್ಲೂ ನಮ್ಮ ಪಕ್ಷ ಅಕಾರದಲ್ಲಿದೆ. ಎಲ್ಲಿಯೂ ಕೂಡ ಪಕ್ಷದ ಇಲ್ಲವೇ ಸರ್ಕಾರದ ವಿರುದ್ಧ ಕಾರ್ಯಕರ್ತರು ತಿರುಗಿಬಿದ್ದಿಲ್ಲ. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಬೇಕೆಂದು ಅಮಿತ್ ಶಾ ಸಲಹೆ ಮಾಡಿದ್ದಾಗಿ ಉನ್ನತ ಮೂಲಗಳು ತಿಳಿಸಿವೆ.

ಇನ್ನು ಭೇಟಿ ಸಂದರ್ಭದಲ್ಲಿ ಸಂಪುಟ ಪುನಾರಚನೆ ಹಾಗೂ ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕಾತಿ ಬಗ್ಗೆಯೂ ಉಭಯ ನಾಯಕರ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.

Articles You Might Like

Share This Article