ಕುತೂಹಲ ಮೂಡಿಸಿದೆ ರಮೇಶ್ – ಜಾರಕಿಹೊಳಿ ಅಮಿತಾ ಷಾ ಭೇಟಿ

Social Share

ಪಣಜಿ,ಫೆ.10- ಶತಾಯಗತಾಯ ಸಂಪುಟ ಸೇರಲು ಕಸರತ್ತು ನಡೆಸುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಗೋವಾ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿರುವ ಅಮಿತ್ ಷಾ ಅವರು ಪಣಜಿಗೆ ಬಂದ ವೇಳೆ ಜಾರಕಿಹೊಳಿಯನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಅಮಿತ್ ಷಾ, ರಮೇಶ್ ಜಾರಕಿಹೊಳಿ ಮಾತುಕತೆ ನಡೆಯುತ್ತಿದ್ದ ವೇಳೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಗೋವಾ ಚುನಾವಣಾ ಉಸ್ತುವಾರಿ ದೇವೇಂದ್ರ ಫಡ್ನವೀಸ್ ಕೂಡ ಹಾಜರಿದ್ದರು. ಅತ್ಯಾಚಾರ ಆರೋಪ ಪ್ರಕರಣದಲ್ಲಿ ಸಿಲುಕಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅವರ ಮೇಲೆ ಎಸ್‍ಐಟಿ ಇತ್ತೀಚೆಗೆ ಅಷ್ಟೇ ಪ್ರಕರಣಕ್ಕೆ ಸಂಬಂಸಿದಂತೆ ಬಿ ರಿಪೋರ್ಟ್ ಸಲ್ಲಿಸಿತ್ತು. ಇದರ ಬೆನ್ನಲ್ಲೆ ಈ ಮೂವರು ಭೇಟಿಯಾಗಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಕೆಲ ದಿನಗಳ ಹಿಂದೆ ಪಣಜಿಯಲ್ಲಿ ಫಡ್ನವೀಸ್ ಅವರನ್ನು ಜಾರಕಿಹೊಳಿ ಪ್ರತ್ಯೇಕವಾಗಿ ಭೇಟಿಯಾಗಿ ಸಂಪುಟಕ್ಕೆ ತಮ್ಮನ್ನು ಪರಿಗಣಿಸಲು ವರಿಷ್ಠರಿಗೆ ಮನವರಿಕೆ ಮಾಡಿಕೊಡುವಂತೆ ಬೇಡಿಕೆ ಇಟ್ಟಿದ್ದರು. ಗೋವಾದ ಬಿಚೋಲಿಮ್, ಸಾಕ್ಲಿ, ಮಾಯೇಮ್ ಕ್ಷೇತ್ರದಲ್ಲಿ ಅಮಿತ್ ಶಾ ಕ್ಯಾಂಪೇನ್ ನಡೆಸುತ್ತಿದ್ದು, ಮನೆಗೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ, ಭೇಟಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಮೇಶ್ ಜಾರಕಿಹೊಳಿ ಅವರನ್ನು ಕಂಡು ಅಮಿತ್ ಶಾ ಅವರು ಜಾರಕಿಹೊಳಿ ಇದರ್ ಆವೋ(ಇಲ್ಲಿ ಬನ್ನಿ) ಎಂದು ಕರೆದರು. ಅಮಿತ್ ಶಾ ಜೊತೆ ಕೆಲ ಹೊತ್ತು ಪ್ರಚಾರದಲ್ಲಿ ಜಾರಕಿಹೊಳಿ ಕೂಡ ಭಾಗಿಯಾಗಿದ್ದಾರೆ. ಈ ಸಮಯ ಅಮಿತ್ ಶಾ ಅವರನ್ನು ಜಾರಕಿಹೊಳಿ ಗೋಕಾಕ್ ಕ್ಷೇತ್ರದಲ್ಲಿ ನಿರ್ಮಾಣವಾಗಲಿರುವ ಗಟ್ಟಿ ಬಸವಣ್ಣ ಡ್ಯಾಂ ಕಾಮಗಾರಿಗೆ ಚಾಲನೆ ನೀಡಲು ಆಹ್ವಾನ ನೀಡಿದ್ದಾರೆ. ಅದಕ್ಕೆ ಅವರು ಆಯೇಂಗೆ ಆಯೇಂಗೆ(ಬರುತ್ತೇನೆ) ಎಂದು ತಿಳಿಸಿದ್ದಾರೆ.
ರಾತ್ರಿ ಭೋಜನಕೂಟ ವೇಳೆ ಸಿಗೋಣ ಎಂದು ಜಾರಕಿಹೊಳಿ ಅವರಿಗೆ ಅಮಿತ್ ಶಾ ಅವರು ತಿಳಿಸಿದ್ದು, ಔತಣಕೂಟದಲ್ಲಿ ಭಾಗಿಯಾಗಿದ್ದಾರೆ.
ಈ ವೇಳೆ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್, ಗೋವಾ ಸಿಎಂ ಪ್ರಮೋದ್ ಸಾವಂತ್ ಸೇರಿ ಹಲವು ನಾಯಕರು ಭಾಗಿಯಾಗಿದ್ದರು.

Articles You Might Like

Share This Article