ಉಗ್ರರು, ನಕ್ಸಲರಿಗೆ ಶುರುವಾಗಿದೆ ‘ಚಾಣಾಕ್ಷ’ ಅಮಿತ್ ಶಾ ಭಯ..!

ನವದೆಹಲಿ, ಜೂ.1-ಪ್ರಧಾನಿ ನರೇಂದ್ರ ಮೋದಿ ಅವರ ಪರಮಾಪ್ತ ಮತ್ತು ಬಿಜೆಪಿ ಚಾಣಾಕ್ಷ ಅಮಿತ್ ಶಾ ಅತ್ಯಂತ ಮಹತ್ವದ ಗೃಹ ಖಾತೆಯ ಜವಾಬ್ದಾರಿ ವಹಿಸಿಕೊಂಡಿರುವುದು ಭಯೋತ್ಪಾದಕರು ಮತ್ತು ನಕ್ಸಲರಲ್ಲಿ ಆತಂಕ ಸೃಷ್ಟಿಸಿದೆ.

ದೇಶದ ಆಂತರಿಕ ಭದ್ರತೆಯ ಉಸ್ತುವಾರಿ ವಹಿಸಿರುವ ಅಮಿತ್ ಶಾ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ತಲೆಎತ್ತಿರುವ ಉಗ್ರಗಾಮಿಗಳನ್ನು ಅತ್ಯಂತ ವ್ಯವಸ್ಥಿತವಾಗಿ ಮಟ್ಟಹಾಕಲು ತಮ್ಮದೇ ಆದ ಮಾಸ್ಟರ್ ಪ್ಲಾನ್ ರೂಪಿಸುತ್ತಿದ್ದಾರೆ.

ಛತ್ತೀಸ್‍ಗಡ, ಜಾರ್ಖಂಡ್, ಬಿಹಾರ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮತ್ತೆ ಬಾಲ ಬಿಚ್ಚಿರುವ ನಕ್ಸಲರನ್ನು ಸದೆ ಬಡಿಯಲು ಸಹ ಚಾಣಾಕ್ಷ ಅಮಿತ್ ಶಾ ಹೊಸ ಕಾರ್ಯತಂತ್ರ ಅನುಸರಿಸಲಿದ್ದಾರೆ ಎಂದು ಗೃಹ ವ್ಯವಹಾರಗಳ ಸಚಿವಾಲಯದ ಉನ್ನತ ಮೂಲಗಳು ತಿಳಿಸಿವೆ.

ಅಮಿತ್ ಶಾ ಯಾವುದೇ ಕಾರ್ಯ ಕೈಗೊಳ್ಳಬೇಕಾದರೂ ಆ ಬಗ್ಗೆ ಪೂರ್ವಭಾವಿ ತಯಾರಿ ನಡೆಸಿ ಸದೃಢ ನೀಲನಕ್ಷೆಯನ್ನು ಸಿದ್ದಪಡಿಸುತ್ತಾರೆ. ಅವರ ಯೋಜನೆ ಮತ್ತು ಕಾರ್ಯತಂತ್ರಗಳು ಬಹುತೇಕ ಯಶಸ್ವಿಯಾಗಿದೆ.

ಗೃಹ ಖಾತೆಯನ್ನು ಸಮರ್ಥವಾಗಿ ನಿರ್ವಹಿಸಲು ಇದೇ ಕಾರಣಕ್ಕಾಗಿ ಶಾ ಅವರನ್ನು ನಿಯೋಜಿಸಲಾಗಿದೆ. ಭಯೋತ್ಪಾದಕರು, ಆತಂಕವಾದಿಗಳು ಮತ್ತು ನಕ್ಸಲರನ್ನು ಮಟ್ಟ ಹಾಕಿದರೆ ದೇಶದ ಆಂತರಿಕ ಭದ್ರತೆ ಮತ್ತಷ್ಟು ಸುಭದ್ರವಾಗಲಿದ ಎಂಬುದು ಮೋದಿ ಮತ್ತು ಅಮಿತ್ ಶಾ ಲೆಕ್ಕಾಚಾರ.

ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಉಗ್ರರು ಮತ್ತು ಮಾವೋವಾದಿಗಳನ್ನು ಮಟ್ಟ ಹಾಕಲು ಅಮಿತ್ ಶಾ ಈಗಾಗಲೇ ಒಂದು ಯೋಜನೆ ಸಿದ್ಧಪಡಿಸಿದ್ದಾರೆ. ಇಂದು ಅಥವಾ ನಾಳೆ ಈ ಬಗ್ಗೆ ಸಚಿವಾಲಯದ ಉನ್ನತಾಧಿಕಾರಿಗಳೊಂದಿಗೆ ಮಹತ್ವದ ಚರ್ಚೆ ನಡೆಸಿ ಅದನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚಾಣಾಕ್ಷಾ ಅಮಿತ್ ಶಾ ಸಿದ್ದಪತಿಸಿರುವ ನೀಲ ನಕ್ಷೆ ಯಾವುದು ? ಅದರ ಮಾಹಿತಿಗಳೇನು ಎಂಬ ಬಗ್ಗೆ ನಿಖರ ಮಾಹಿತಿ ಲಭಿಸಿಲ್ಲ. ಅವೆಲ್ಲವನ್ನು ಗೌಪ್ಯವಾಗಿಡಲಾಗಿದೆ.

ಅಮಿತ್ ಶಾಗೆ ಗೃಹ ಖಾತೆ ನೀಡಿರುವ ಮೋದಿ, ದೇಶದ ರಕ್ಷಣೆಗಾಗಿ ಮತ್ತೊಬ್ಬ ಸಮರ್ಥ ಮತ್ತು ದಕ್ಷ ನಾಯಕ ರಾಜನಾಥ್ ಸಿಂಗ್ ಅವರಿಗೆ ರಕ್ಷಣಾ ಖಾತೆಯ ಜವಾಬ್ದಾರಿ ನೀಡಿ ಜಾಣ್ಮೆ ಪ್ರದರ್ಶಿಸಿದ್ದಾರೆ.

ಈ ಹಿಂದೆ ರಾಜನಾಥ್ ಸಿಂಗ್ ಗೃಹ ಸಚಿವರಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದರು. ಶಾ ಮತ್ತು ಸಿಂಗ್‍ಗೆ ಈ ಎರಡೂ ಮಹತ್ವದ ಖಾತೆಗಳ ಹೊಣೆಗಾರಿಕೆ ನೀಡಿರುವುದರಿಂದ ಪರಸ್ಪರ ಸಮನ್ವಯತೆಯಿಂದ ಇವರಿಬ್ಬರು ಕಾರ್ಯನಿರ್ವಹಿಸಲಿದ್ದಾರೆ. ಆಂತರಿಕ ಮತ್ತು ಬಾಹ್ಯ ಶಕ್ತಿಗಳಿಂದ ರಾಷ್ಟ್ರವನ್ನು ರಕ್ಷಿಸಲು ಮೋದಿ ಇಬ್ಬರು ಸಮರ್ಥರನ್ನು ನೇಮಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

Sri Raghav

Admin