ಬಿಜೆಪಿ ಬಲವರ್ಧನೆಗೆ ‘ಚಾಣಕ್ಯ ತಂತ್ರ’

Social Share

ಬೆಂಗಳೂರು, ಆ.4- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೆ ಹುಟ್ಟುಹಬ್ಬ ನಿರೀಕ್ಷೆಗೂ ಮೀರಿ ಯಶಸ್ವಿಯಾದ ಬೆನ್ನಲ್ಲೇ ಬಿಜೆಪಿಯ ಚಾಣಕ್ಯ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಪಕ್ಷ ಬಲಪಡಿಸುವ ಕುರಿತು ಮಹತ್ವದ ರಾಜಕೀಯ ತಂತ್ರ ಹೆಣೆದಿದ್ದಾರೆ.

ಅಕೃತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ಅವರು ಖಾಸಗಿ ಹೊಟೇಲ್ನಲ್ಲಿ ಬಿಜೆಪಿಯ ರಾಜ್ಯ ಘಟಕದ ನಾಯಕರ ಜತೆ ಗೌಪ್ಯ ಸಭೆ ನಡೆಸಿರುವುದು ಮಹತ್ವ ಪಡೆದುಕೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಉಪಾಧ್ಯಕ್ಷ ನಿರ್ಮಲ್ಕುಮಾರ್ ಸುರಾನ, ಸಚಿವರಾದ ಮುರುಗೇಶ್ ನಿರಾಣಿ, ಆರಗ ಜ್ಞಾನೇಂದ್ರ ಸೇರಿದಂತೆ ಹಲವರ ಜತೆ ಸಭೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಒಂದು ಕಡೆ ನಿನ್ನೆಯಷ್ಟೆ ದಾವಣಗೆರೆಯಲ್ಲಿ ಕಾಂಗ್ರೆಸ್ ಸಿದ್ದರಾಮಯ್ಯನವರ ಜನ್ಮ ದಿನೋತ್ಸವದಲ್ಲಿ ಶಕ್ತಿ ಪ್ರದರ್ಶಿಸಿ ಮುಂದಿನ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿತ್ತು. ಇದೀಗ ಅಮಿತ್ ಷಾ ಅವರು ಈ ಮೊದಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಪ್ರತ್ಯೇಕವಾಗಿ ಕರೆಸಿಕೊಂಡು 20 ನಿಮಿಷ ಮಾತುಕತೆ ನಡೆಸಿದರು.

ನಂತರ ಸಿಎಂ ಹಾಗೂ ಪಕ್ಷದ ಕೆಲವು ನಾಯಕರ ಜತೆ ಗೌಪ್ಯವಾಗಿ ಸಭೆ ನಡೆಸಿದ ಅಮಿತ್ ಷಾ ಪಕ್ಷ ಸಂಘಟನೆ ಹಾಗೂ ಚುನಾವಣೆಯಲ್ಲಿ ಗೆಲ್ಲಲು ಕೈಗೊಳ್ಳಬೇಕಾದ ರಣತಂತ್ರಗಳ ಬಗ್ಗೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೊದಲು ಬಿಎಸ್ವೈ ಅವರ ಜತೆ ಮಾತುಕತೆ ನಡೆಸಿದ ಷಾ, ಸಿದ್ದರಾಮಯ್ಯನವರ ಕಾರ್ಯಕ್ರಮದ ಕುರಿತು ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.

ನಾವು ಇದನ್ನು ಹಗುರವಾಗಿ ಪರಿಗಣಿಸುವುದು ಬೇಡ. ಸ್ವತಃ ಕಾಂಗ್ರೆಸ್ ಕೂಡ ನಿರೀಕ್ಷೆ ಮಾಡದ ರೀತಿಯಲ್ಲಿ ಯಶಸ್ವಿಯಾಗಿ ನಡೆದಿದೆ. ಇದಕ್ಕೆ ಪರ್ಯಾಯವಾಗಿ ಹುಬ್ಬಳ್ಳಿ ಅಥವಾ ಮೈಸೂರು ಭಾಗದಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ನಡೆಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಪಕ್ಷ ಬಯಸಿದರೆ ನಾನು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ಸಿದ್ಧನಿದ್ದೇನೆ. ಇತ್ತೀಚೆಗೆ ನಡೆದಿರುವ ಕೆಲವು ಘಟನೆಗಳು ನಮ್ಮ ಪಕ್ಷಕ್ಕೆ ಹಿನ್ನಡೆ ಉಂಟುಮಾಡುವ ಸಾಧ್ಯತೆಯಿದೆ. ಕಾರ್ಯಕರ್ತರಲ್ಲಿ ವಿಶ್ವಾಸ ಮತ್ತು ಧೈರ್ಯ ತುಂಬುವ ಕೆಲಸವಾಗಬೇಕು. ಮೋದಿ ಅವರನ್ನು ಕರೆಸಿ ಬೃಹತ್ ಸಮಾವೇಶ ನಡೆಸೋಣವೆಂದು ಯಡಿಯೂರಪ್ಪ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಬಿಎಸ್ವೈ ಅವರ ಈ ಸಲಹೆಗೆ ಸಹಮತ ವ್ಯಕ್ತಪಡಿಸಿದ ಅಮಿತ್ ಷಾ 75ನೆ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿರುವ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ಇದರಿಂದ ಕಾರ್ಯಕರ್ತರಲ್ಲಿ ಪಕ್ಷದ ಬಗ್ಗೆ ಉಂಟಾಗಿರುವ ಗೊಂದಲ ತುಸು ನಿವಾರಣೆಯಾಗುತ್ತದೆ ಎಂದು ಹೇಳಿದ್ದಾರೆ.

ಮೈಸೂರು ಬದಲು ಮಂಗಳೂರಿನಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ನಡೆಸುವ ಕುರಿತು ಪಕ್ಷದ ನಾಯಕರ ಜತೆ ಚರ್ಚಿಸಲಾಗುವುದು. ಸರ್ಕಾರ ಹಾಗೂ ಪಕ್ಷಕ್ಕೆ ನೀವು ಅಗತ್ಯವಾದ ಸಲಹೆ ಮತ್ತು ಮಾರ್ಗದರ್ಶನ ನೀಡಬೇಕೆಂದು ಬಿಎಸ್ವೈಗೆ ಅಮಿತ್ ಷಾ ಮನವಿ ಮಾಡಿದ್ದಾರೆ.

ಯಡಿಯೂರಪ್ಪ ನಿರ್ಗಮನದ ಬೆನ್ನಲ್ಲೇ ಸಿಎಂ ಹಾಗೂ ಸಂಪುಟದ ಸಹೋದ್ಯೋಗಿಗಳ ಜತೆಯೂ ಅಮಿತ್ ಷಾ ಮಾತುಕತೆ ನಡೆಸಿದ್ದಾರೆ. ಸುಮಾರು 30 ನಿಮಿಷಗಳ ಕಾಲ ಬೊಮ್ಮಾಯಿ ಮತ್ತಿತರರು ಇತ್ತೀಚಿನ ಬೆಳವಣಿಗೆ ಕುರಿತಂತೆ ಮಾಹಿತಿ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಮತ್ತಿತರ ಕಡೆ ಉಂಟಾಗಿರುವ ಪ್ರಕ್ಷುಬ್ಧ ವಾತಾವರಣ, ಕಾರ್ಯಕರ್ತರ ರಾಜೀನಾಮೆ, ಕಾನೂನು ಸುವ್ಯವಸ್ಥೆ, ಸರ್ಕಾರ ತೆಗೆದುಕೊಂಡಿರುವ ನಿರ್ಧಾರಗಳು, ಆರೋಪಿಗಳ ಬಂಧನ ಸೇರಿದಂತೆ ಮತ್ತಿತರ ಬೆಳವಣಿಗೆಗಳ ಬಗ್ಗೆ ಸುದೀರ್ಘವಾದ ವಿವರ ನೀಡಿದ್ದಾರೆ.

ಸಿದ್ದರಾಮಯ್ಯ ಕಾರ್ಯಕ್ರಮ ಯಶಸ್ವಿಯಾಗಿರುವುದರ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ. ಮೊದಲು ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಸಚಿವರು, ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಪದಾಕಾರಿಗಳು ಸೇರಿದಂತೆ ಪ್ರತಿಯೊಬ್ಬರೂ ಮಾಡಬೇಕು.

ಬಿಜೆಪಿ ಕಾರ್ಯಕರ್ತರ ಪಕ್ಷ. ಅವರನ್ನು ಯಾವುದೇ ಸಂದರ್ಭದಲ್ಲೂ ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಮೊದಲು ಅವರ ಮನೆಗಳಿಗೆ ಭೇಟಿ ಕೊಟ್ಟು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವಾಗಬೇಕೆಂದು ಷಾ ಸೂಚಿಸಿದ್ದಾರೆ. ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಾಗ ಎಲ್ಲರೂ ಒಗ್ಗಟ್ಟಿನಿಂದ ಎದುರಿಸಬೇಕು. ಮೊದಲು ಕಾನೂನು ಸುವ್ಯವಸ್ಥೆಗೆ ಒತ್ತು ಕೊಟ್ಟು ಜನರಲ್ಲಿ ಆತ್ಮಸ್ಥೈರ್ಯ ತುಂಬಿ. ಪಕ್ಷದ ವತಿಯಿಂದ ಸಮಾವೇಶ ನಡೆಸುವ ಜವಾಬ್ದಾರಿಯನ್ನು ನಮಗೆ ಬಿಡಿ ಎಂದು ಅಮಿತ್ ಷಾ ಹೇಳಿದ್ದಾರೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಅಮಿತ್ ಷಾ ಅವರು ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಬಲಪಡಿಸುವ ಕುರಿತಂತೆ ಪ್ರಮುಖರ ಜತೆ ನಡೆಸಿರುವ ಈ ಸಭೆ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾಲವೇ ತೀರ್ಮಾನಿಸುತ್ತದೆ.

Articles You Might Like

Share This Article