ನವದೆಹಲಿ, ಫೆ.16- ಈಶಾನ್ಯ ದೆಹಲಿ ಗಲಭೆಗಳ ತನಿಖೆಗಾಗಿ ದೆಹಲಿ ಪೊಲೀಸ್ ಪಡೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಇಂದು ಅಭಿನಂದಿಸಿದ್ದಾರೆ. ಈ ಪಡೆಯು ಮುಂದಿನ ಐದು ವರ್ಷಗಳಿಗಷ್ಟೇ ಅಲ್ಲ, ಮುಂದಿನ 25 ವರ್ಷಗಳಿಗೂ ಮಾರ್ಗನಕ್ಷೆ ರೂಪಿಸಬೇಕು ಎಂದು ಷಾ ಕರೆ ನೀಡಿದ್ದಾರೆ.
ಅವರು ದೆಹಲಿ ಪೊಲೀಸ್ ಪಡೆಯ 75ನೆ ಸಂಸ್ಥಾಪನಾ ದಿನದ ಪಥ ಸಂಚಲನದಲ್ಲಿ ಪಾಲ್ಗೊಂಡು ಮಾತನಾಡಿದರು. ದೆಹಲಿ ಪೊಲೀಸರು ಈಶಾನ್ಯ ದೆಹಲಿ ಗಲಭೆಗಳು ಮತ್ತು ಕೊರೊನಾ ಪಿಡುಗಿನ ಸಂದರ್ಭದಲ್ಲಿ ಕಠಿಣ ಪರಿಶ್ರಮದಿಂದ ಕಾರ್ಯನಿರ್ವಹಿಸಿದ್ದಾರೆ. ಗಲಭೆ ಪ್ರಕರಣಗಳ ತನಿಖೆ ನಡೆಸಿದ ರೀತಿ ಮತ್ತು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಕ್ಕಾಗಿ ನಾನು ಅಭಿನಂದಿಸುತ್ತೇನೆ ಎಂದು ಷಾ ನುಡಿದರು.
