ಬೆಂಗಳೂರು, ಜು.26- ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜೈ ಶಾ ಆದಾಯ ಮೂಲವನ್ನು ಕೇಂದ್ರ ತನಿಖಾ ಸಂಸ್ಥೆಗಳು ಏಕೆ ಹುಡುಕುತ್ತಿಲ್ಲಾ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಕೆಪಿಸಿಸಿ ಎಂದು ಸರಣಿ ಟ್ವಿಟ್‍ಗಳ ಮೂಲಕ ಸೋನಿಯಾಗಾಂಧಿ ಅವರ ಜಾರಿ ನಿರ್ದೇಶನಾಲಯದ ವಿಚಾರಣೆಯನ್ನು ಪ್ರಶ್ನಿಸಿದೆ.
ಅದಾನಿ ಪೋರ್ಟ್‍ನಲ್ಲಿ ಹಲವು ಬಾರಿ ಸಾವಿರಾರು ಕೋಟಿ ರೂ. ಮೊತ್ತದ ಡ್ರಗ್ಸ್ ಪತ್ತೆಯಾಯಿತು. ಸಿಬಿಐ, ಇಡಿ ಇದರ ಕುರಿತು ಏಕೆ ತನಿಖೆ ಮಾಡುತ್ತಿಲ್ಲ ಎಂದು ಪ್ರಶ್ನಿಸಲಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ತರಲು ಆಪರೇಷನ್ ಕಮಲ ನಡೆಸಲಾಯಿತು. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಕರೆದೊಯ್ದು ಮುಂಬೈ ಹೋಟೆಲ್‍ನಲ್ಲಿಟ್ಟು ಕೋಟ್ಯಾಂತರ ರೂ. ಖರ್ಚು ಮಾಡಲಾಯಿತು. ಈ ಹಣದ ಮೂಲವನ್ನು ಹುಡುಕಲಿಲ್ಲ.
ಸಚಿವ ಸ್ಥಾನವನ್ನು 50ರಿಂದ 60 ಕೋಟಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಬಿಜೆಪಿ ಶಾಸಕರೇ ಹೇಳಿಕೆ ನೀಡಿದ್ದಾರೆ. ಸಿಎಂ ಹುದ್ದೆಗೆ 2,500 ಕೋಟಿ ಕೇಳಲಾಯಿತು ಎಂಬ ಹೇಳಿಕೆಯ ಕುರಿತು ಕೇಂದ್ರ ತನಿಖಾ ಸಂಸ್ಥೆಗಳು ಬೆನ್ನತ್ತಲಿಲ್ಲವೇಕೆ ಎಂದು ಕೆಣಕಲಾಗಿದೆ.
ಆಪರೇಷನ್ ಕಮಲದ 1000 ಕೋಟಿ ವ್ಯವಹಾರ ಕೇಳಲಿಲ್ಲ, 500 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿ ಮಗಳ ಅದ್ಧೂರಿ ಮದುವೆ ಮಾಡಿದ ಜನಾರ್ದನ ರೆಡ್ಡಿ ಅವರ ಆರ್ಥಿಕ ಮೂಲವನ್ನೂ ತನಿಖೆ ಮಾಡಲಿಲ್ಲ. ಕೇಂದ್ರ ತನಿಖಾ ಸಂಸ್ಥೆಗಳು ತನಿಖಾ ಸಂಸ್ಥೆಗಳಾಗಿ ಉಳಿದಿಲ್ಲ, ಬಿಜೆಪಿಯ ಅಪಪ್ರಚಾರದ ಯಂತ್ರಗಳಾಗಿವೆ ಎಂದು ಕಿಡಿಕಾರಲಾಗಿದೆ.
ರಫೆಲ್ ಹಗರಣ ವಿಚಾರದಲ್ಲಿ ಸಿಬಿಐ ಮುಖ್ಯಸ್ಥರನ್ನೇ ಗೂಡಾಚಾರಿಕೆ ಮಾಡಿ, ರಾತ್ರೋರಾತ್ರಿ ಎತ್ತಂಗಡಿ ಮಾಡಿದ ಇತಿಹಾಸ ಇದಕ್ಕೆ ಪುಷ್ಠಿ ಕೊಡುತ್ತದೆ. ಈಗ ಸೋನಿಯಾ ಗಾಂಧಿಯವರ ವಿಚಾರಣೆಯೂ ಸಹ ಬಿಜೆಪಿಯ ದ್ವೇಷ ರಾಜಕೀಯದ ಕುತಂತ್ರದ ಭಾಗ ಎಂದು ಕಾಂಗ್ರೆಸ್ ಆರೋಪಿಸಿದೆ.
ಕೇಂದ್ರ ಸರ್ಕಾರಕ್ಕೆ ಇಬ್ಬರು ಮಾಲೀಕರಿದ್ದು, ಆ ಉದ್ಯಮಿಗಳು ಹೇಳಿದಂತೆ ಎಲ್ಲವೂ ನಡೆಯುತ್ತಿದೆ. ಐಟಿ, ಇಡಿ, ಸಿಬಿಐಗಳ ಮಾಲೀಕತ್ವ ಕೇಂದ್ರ ಸರ್ಕಾರದ್ದು. ಕೇಂದ್ರ ಸರ್ಕಾರಕ್ಕೆ ಉದ್ಯಮಿಗಳು ಮಾಲೀಕರಾಗಿದ್ದಾರೆ. ಹೀಗಾಗಿ ಇಲ್ಲಿ ಯಾರೂ ಸ್ವತಂತ್ರರಲ್ಲ. ಸ್ವಾಯುತ್ತ ತನಿಖಾ ಸಂಸ್ಥೆಗಳು ಸ್ವತಂತ್ರ ಕಳೆದುಕೊಂಡು 8 ವರ್ಷಗಳಾಗಿವೆ. ಈಗ ಅವು ಬಿಜೆಪಿಯ ಕಾವಲು ನಾಯಿಗಳಂತಾಗಿವೆ. ಛೂ ಎಂದರೆ ಕಚ್ಚುತ್ತವೆ, ಶ್ ಎಂದರೆ ಮಲಗುತ್ತವೆ! ಬಿಜೆಪಿಗೆ ಬೇಕಾದಾಗ ಕೂಗುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಬಿಜೆಪಿಯ ಐಟಿ, ಇಡಿ ಮೋರ್ಚಾಗಳು ವಾಷಿಂಗ್ ಪೌಡರ್ ನಿರ್ಮಾ ಹಾಗೂ ಕೊಳಚೆ ನೀರು ಎಂಬ ದ್ವಿಪಾತ್ರ ವಹಿಸುತ್ತಿವೆ. ಬಿಜೆಪಿಗೆ ಬೇಕಾದವರನ್ನು ಸ್ವಚ್ಛಗೊಳಿಸಲು ನಿರ್ಮಾ ಪೌಡರ್‍ನಂತೆ ಕೆಲಸ ಮಾಡುತ್ತವೆ. ಬಿಜೆಪಿಗೆ ವಿರುದ್ಧವಾಗಿರುವವರ ಶುಭ್ರ ವಸ್ತ್ರಕ್ಕೆ ಕೆಸರು ಎರಚಲು ಕೊಳಚೆ ನೀರಿನಂತೆ ಕೆಲಸ ಮಾಡುತ್ತಿವೆ. ಬಿಜೆಪಿ ಅದೆಷ್ಟೇ ಯತ್ನಿಸಿದರೂ ಶುಭ್ರ ಚರಿತ್ರೆಯ ಸೋನಿಯಾಗಾಂಧಿ ಅವರಿಗೆ ಮಸಿ ಬಳಿಯಲು ಆಗದು ಎಂದು ಕಾಂಗ್ರೆಸ್ ಹೇಳಿದೆ.
ಇತ್ತೀಚಿಗೆ ಮುಖ್ಯ ನ್ಯಾಯಮೂರ್ತಿಗಳು ದೇಶದಲ್ಲಿನ ದ್ವೇಷ ರಾಜಕೀಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು, ನ್ಯಾಯಾಂಗವೂ ತನ್ನಿಷ್ಟದಂತೆ ನಡೆದುಕೊಳ್ಳಬೇಕು ಎಂದು ಸರ್ಕಾರ ಬಯಸುತ್ತಿದೆ ಎಂದಿದ್ದರು. ಐಟಿ, ಇಡಿ, ಸಿಬಿಐಗಳಂತೆ ನ್ಯಾಯಾಂಗವನ್ನೂ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನ ಬಿಜೆಪಿ ಸರ್ಕಾರ ನಡೆಸಿತ್ತೇ ಎಂಬ ಪ್ರಶ್ನೆ ಮೂಡುತ್ತದೆ ಎಂದು ಟ್ವಿಟ್‍ನಲ್ಲಿ ಕೆಪಿಸಿಸಿ ಅನುಮಾನ ವ್ಯಕ್ತಪಡಿಸಿದೆ.