ಗೆಜ್ಜಲೆಗೆರೆ(ಮದ್ದೂರು),ಡಿ.30- ಮುಂದಿನ ಮೂರು ತಿಂಗಳ ಒಳಗೆ ರಾಜ್ಯದ ಪ್ರತಿ ಗ್ರಾಮಪಂಚಾಯ್ತಿಯಲ್ಲೂ ಎರಡು ಲಕ್ಷ ಪ್ರಾಥಮಿಕ ಡೇರಿಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಷಾ ಪ್ರಕಟಿಸಿದ್ದಾರೆ.
ಮನ್ಮುಲ್ ವತಿಯಿಂದ ನೂತನವಾಗಿ ನಿರ್ಮಿಸಲಾದ 264 ಕೋಟಿ ವೆಚ್ಚದ ಮೆಗಾ ಡೇರಿ ಉದ್ಘಾಟಿಸಿ ಮಾತನಾಡಿದ ಅವರು, ಎನ್ಡಿಡಿಬಿ ಮೂಲಕ ರಾಜ್ಯದ ಎಲ್ಲ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಮೂರು ತಿಂಗಳೊಳಗೆ ಪ್ರಾಥಮಿಕ ಡೇರಿಗಳನ್ನು ಸ್ಥಾಪನೆ ಮಾಡ ಲಾಗುವುದು. ಇದರಿಂದ ರೈತರ ಬದುಕು ಹಸನಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮುಂದಿನ ಮೂರು ವರ್ಷದೊಳಗೆ ಜಿಲ್ಲೆಗೊಂದು ಮೆಗಾ ಡೇರಿಗಳನ್ನು ಸ್ಥಾಪನೆ ಮಾಡುವ ಗುರಿ ಇದೆ. ರೈತರು ಯಾವುದೇ ಮಧ್ಯವರ್ತಿಗಳನ್ನು ಅವಲಂಬಿಸದೆ ನೇರವಾಗಿ ವಹಿವಾಟು ನಡೆಸಲು ಅನುಕೂಲವಾಗುತ್ತದೆ ಎಂದು ಹೇಳಿದರು.
ರೈತರಿಂದಲೇ ರೈತರಿಗಾಗಿ ಇರುವ ಕ್ಷೇತ್ರವೆಂದರೆ ಅದು ಸಹಕಾರಿ ಕ್ಷೇತ್ರ. ಇಲ್ಲಿನ ಸದಸ್ಯರಿಗಾಗಲಿ ಇಲ್ಲವೇ ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ. ಎಲ್ಲವೂ ಪಾರದರ್ಶಕವಾಗಿ ನಡೆಯಲಿದೆ. ನಾನು ಈ ವೇದಿಕೆಯಿಂದಲೇ ರೈತರಿಗೆ ಅಭಯ ನೀಡುತ್ತೇನೆ ಎಂದು ವಾಗ್ದಾನ ಮಾಡಿದರು.
ದೇಶದಲ್ಲಿ ಕರ್ನಾಟಕ ಮತ್ತು ಗುಜರಾತ್ ಸಹಕಾರ ಕ್ಷೇತ್ರಕ್ಕೆ ಮಾದರಿಯಾದ ರಾಜ್ಯಗಳಾಗಿವೆ. 1975ರಿಂದ 2022ರವರೆಗೆ ಕರ್ನಾಟಕ ಸಹಕಾರ ಕ್ಷೇತ್ರ ಹಲವಾರು ಸಾಧನೆಗಳನ್ನು ಮಾಡಿದೆ. ಇದು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.
2023ರ ಅಂತ್ಯಕ್ಕೆ ನೀರೊಳಗಿನ ಮೆಟ್ರೋ ರೈಲು ಸಂಚಾರ
64 ಸಾವಿರ ಅಂಗನವಾಡಿ ಕಾರ್ಯಕರ್ತೆಯರ ಮೂಲಕ 65 ಲಕ್ಷ ಮಕ್ಕಳಿಗೆ ಕ್ಷೀರಭಾಗ್ಯ ತಲುಪುತ್ತದೆ. ಪ್ರತಿ ವರ್ಷ 1250 ಕೋಟಿ ವಹಿವಾಟು ನಡೆಸಲಾಗುತ್ತದೆ. ಒಬ್ಬ ರೈತ 100 ರೂ. ವಹಿವಾಟು ನಡೆಸಿದರೆ 80 ರೂ. ನೇರವಾಗಿ ಅವನ ಖಾತೆಗೆ ಸಂದಾಯವಾಗುತ್ತದೆ ಎಂದು ತಿಳಿಸಿದರು.
16 ಜಿಲ್ಲೆಗಳಲ್ಲಿ 28 ಕೋಟಿ ಸಂದಾಯವಾಗುತ್ತದೆ. ಪ್ರಸ್ತುತ ಮನ್ಮುಲ್ ಡೇರಿ 264 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ಪ್ರತಿದಿನ 11 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತದೆ. 16 ಲಕ್ಷ ಲೀಟರ್ ಸಂಗ್ರಹಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಘೋಷಣೆ ಮಾಡಿದರು.
ಸ್ವತಂತ್ರ ಪೂರ್ವದಿಂದಲೇ ಕೇಂದ್ರದಲ್ಲೂ ಸಹಕಾರ ಕ್ಷೇತ್ರವನ್ನು ಸ್ಥಾಪನೆ ಮಾಡಬೇಕೆಂಬ ಬೇಡಿಕೆ ಇತ್ತು. ಆದರೆ ಯಾವುದೇ ಸರ್ಕಾರ ಇದಕ್ಕೆ ತಲೆಕೆಡಿಸಿಕೊಂಡಿರಲಿಲ್ಲ. ಪ್ರಧಾನಿ ನರೇಂದ್ರಮೋದಿ ಅವರು ಸಹಕಾರ ಕ್ಷೇತ್ರ ಸ್ಥಾಪಿಸಿ ರೈತರ ಕಲ್ಯಾಣಕ್ಕೆ ಮುನ್ನುಡಿ ಬರೆದರು ಎಂದು ಅಮಿತ್ ಷಾ ಪ್ರಶಂಸಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಕರ್ನಾಟಕ ಕ್ಷೀರ ಕ್ರಾಂತಿಯಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ಗುಜರಾತ್ ಹೊರತುಪಡಿಸಿದರೆ ಅತಿಹೆಚ್ಚು ಹಾಲು ಉತ್ಪಾದನೆಯಾಗುವುದು ನಮ್ಮ ರಾಜ್ಯದಲ್ಲೇ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದೇಶದಲ್ಲಿ ಹಸಿರುಕ್ರಾಂತಿಯಾದ ನಂತರ ಈಗ ಕ್ಷೀರ ಕ್ರಾಂತಿಯಾಗುತ್ತದೆ. ರೈತರು ಸ್ವಾವಲಂಬಿಯಾಗಿ ಜೀವನ ನಡೆಸಲು ಸಹಕಾರಿ ಕ್ಷೇತ್ರ ಅನುಕೂಲ ಕಲ್ಪಿಸಿದೆ. ನಮ್ಮ ಸರ್ಕಾರ ಪ್ರತಿ ಲೀಟರ್ ಹಾಲಿಗೆ 5 ರೂ. ಪೊ್ರೀತ್ಸಾಹಧನ ನೀಡುತ್ತದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಸ್ಥಾಪಿತವಾದ ಮೆಗಾ ಡೇರಿಗೆ ಮಾಜಿ ಪ್ರಧಾನಿ ದೇವೇಗೌಡರು ನೀಡಿದ ಸಹಕಾರ ಮತ್ತು ಕೊಡುಗೆಯನ್ನು ನಾವು ಮರೆಯಲು ಸಾಧ್ಯವೇ ಇಲ್ಲ. ಅದೇ ರೀತಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಸಹ ಕೆಎಂಎಫ್ ಅಧ್ಯಕ್ಷರಾಗಿದ್ದ ವೇಳೆ ಅದರ ಬೆಳವಣಿಗೆಗೆ ಶ್ರಮಿಸಿದ್ದಾರೆ ಎಂದು ಹೊಗಳಿದರು.
2023ರ ಅಂತ್ಯಕ್ಕೆ ನೀರೊಳಗಿನ ಮೆಟ್ರೋ ರೈಲು ಸಂಚಾರ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಾತನಾಡಿ, ಸಹಕಾರಿ ಕ್ಷೇತ್ರ ರಚನೆಯಾಗಿರುವುದು ಉತ್ತಮ ಬೆಳವಣಿಗೆ. ಆದರೆ ಇಲ್ಲಿ ರೈತರಿಗೆ ವಂಚಿಸುವ ಕೆಲಸವಾಗುತ್ತದೆ. ಅನ್ನದಾತನಿಗೆ ಅನ್ಯಾಯವಾಗದಂತೆ ಕ್ರಮ ತೆಗೆದುಕೊಳ್ಳಬೇಕೆಂದು ವೇದಿಕೆಯಲ್ಲಿದ್ದ ಅಮಿತ್ ಷಾ ಅವರಿಗೆ ಮನವಿ ಮಾಡಿದರು.
ಅಮಿತ್ ಷಾ ಬಂದಿರುವುದು ನಮಗೆ ತುಂಬ ಸಂತೋಷ. ಸಹಕಾರಿ ಕ್ಷೇತ್ರವನ್ನು ಸ್ಥಾಪನೆ ಮಾಡುವ ಮೂಲಕ ಅವರು ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ. ಆದರೆ ಇಲ್ಲಿನ ಸದಸ್ಯರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಿ ಎಂದು ದೇವೇಗೌಡರು ಕಿವಿಮಾತು ಹೇಳಿದರು.
ಆದಿಚುಂಚನಗಿರಿ ಪೀಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದಂತೆ ಗೃಹ ಸಚಿವ ಅಮಿತ್ ಷಾ ಅವರು ಚಾಣುಕ್ಯರೇ. ಮಾಡಿದ ಕೆಲಸ ಮುಗಿಯುವವರೆಗೂ ಬಿಡುವುದಿಲ್ಲ ಎಂದು ಗುಣಗಾನ ಮಾಡಿದರು. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ತಾಯಿ ಹೀರಾಬೆನ್ ನಿಧನಕ್ಕೆ ಕಾರ್ಯಕ್ರಮದಲ್ಲಿ ಸಂತಾಪ ಸೂಚಿಸಲಾಯಿತು.
ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಚಿವರಾದ ಗೋಪಾಲಯ್ಯ, ಎಸ್.ಟಿ.ಸೋಮಶೇಖರ್, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕರಾದ ಡಿ.ಸಿ.ತಮಣ್ಣ, ಸುರೇಶ್ ಗೌಡ, ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
#AmitShah, #Mandya, #BJP,