ಮುಂಬೈ, ಸೆ.13 – ಅಮರಾವತಿ ಫಾರ್ಮಸಿಸ್ಟ್ ಉಮೇಶ್ ಕೊಲ್ಹೆ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಶಹೀಂ ಅಹ್ಮದ್ ಫಿರೋಜ್ ಅಹ್ಮದ್‍ನ ಪತ್ತೆಗೆ ಸುಳಿವು ನೀಡಿದವರಿಗೆ 2 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಘೋಷಿಸಿದೆ. ಮಹಾರಾಷ್ಟ್ರದ ಅಮರಾವತಿ ನಗರದ ಜಾಕೀರ್ ಕಾಲೋನಿ ನಿವಾಸಿ ಅಹಮದ್ (22) ವಿರುದ್ದ ಎರಡು ತಿಂಗಳ ಹಿಂದೆ ಪ್ರಕರಣ ದಾಖಲಾದಾಗಿನಿಂದ ಪರಾರಿಯಾಗಿದ್ದಾನೆ.
ಅಹ್ಮದ್ ಬಂಧನಕ್ಕೆ ಕಾರಣವಾಗುವ ಯಾವುದೇ ರೀತಿಯ ಮಾಹಿತಿಗಾಗಿ ಎನ್‍ಐಎ 2 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದೆ ಎಂದು ಅಕಾರಿಯೊಬ್ಬರು ತಿಳಿಸಿದ್ದಾರೆ. ಈಗಾಗಲೆ ಕೋಲ್ಹೆ ಹತ್ಯೆಗೆ ಸಂಬಂಧಿಸಿದಂತೆ ತನಿಖಾ ಸಂಸ್ಥೆ ಇದುವರೆಗೆ 10 ಜನರನ್ನು ಬಂಧಿಸಿದೆ.
ಪ್ರವಾದಿ ಮೊಹಮ್ಮದ್ ಅವರ ವಿವಾದಾತ್ಮಕ ಹೇಳಿಕೆಗಳ ನೀಡಿ ಅಮಾನತುಗೊಂಡಿರುವ ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ಕೋಲ್ಹೆ ಅವರನ್ನು ಜೂನ್ 21 ರಂದು ಅಮರಾವತಿಯಲ್ಲಿ ಕೊಲೆ ಮಾಡಲಾಗಿತ್ತು.
ಭಾರತೀಯ ದಂಡ ಸಂಹಿತೆ ಸೆಕ್ಷನ್ 120-ಬಿ (ಅಪರಾಧದ ಪಿತೂರಿ), 302 (ಕೊಲೆ), 153-ಎ (ಧರ್ಮ, ಜನಾಂಗದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ) ಅಡಿಯಲ್ಲಿ ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ಎನ್‍ಐಎ ಜುಲೈ 2 ರಂದು ಪ್ರಕರಣ ದಾಖಲಿಸಿದೆ.