ತಾಯಿಯನ್ನು ಕೊಲ್ಲಲು ಅಮೃತಾಗೆ ಇಂಟರ್ನೆಟ್ ಐಡಿಯಾಗಳೇ ಪ್ರೇರಣೆ

ಬೆಂಗಳೂರು, ಫೆ.8- ಎಷ್ಟೇ ಕಷ್ಟವಾದರೂ ಪೋಷಕರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ಅವರನ್ನು ಒಂದು ಹಂತಕ್ಕೆ ತರುತ್ತಾರೆ. ಆದರೆ, ಮಕ್ಕಳು ಬೆಳೆದಂತೆ ಅವೆಲ್ಲವನ್ನೂ ಮರೆತು ವಿಭಿನ್ನವಾದ ಆಲೋಚನೆ ಮಾಡುತ್ತ ತಮ್ಮ ಬದುಕು ಹಾಳುಮಾಡಿಕೊಳ್ಳುವುದರ ಜತೆಗೆ ಪೋಷಕರ ಜೀವಕ್ಕೂ ಕುತ್ತು ತರುತ್ತಾರೆಂಬುದು ಅಮೃತಾ ಪ್ರಕರಣದಲ್ಲಿ ಸಾಬೀತಾಗಿರುವುದು ವಿಪರ್ಯಾಸ.

ಕೆಆರ್ ಪುರಂನ ಅಕ್ಷಯನಗರದ ನಿವಾಸಿ, ಸಾಫ್ಟ್‍ವೇರ್ ಕಂಪೆನಿಯಲ್ಲಿ ಎಂಜಿನಿಯರ್ ಆಗಿದ್ದ ಅಮೃತಾ ಒಳ್ಳೆಯ ಸಂಬಳ ಪಡೆಯುತ್ತಿದ್ದರು. ಆದರೆ, ಇಷ್ಟಕ್ಕೇ ತೃಪ್ತಿಪಟ್ಟುಕೊಳ್ಳದೆ ಐಷಾರಾಮಿ ಜೀವನ ನಡೆಸಲು ಈ ಕೆಲಸಕ್ಕೆ ಗುಡ್‍ಬೈ ಹೇಳಿ ಕ್ರೆಡಿಟ್ ಕಾರ್ಡ್ ಮತ್ತು ಇನ್ನಿತರೆ ಮೂಲಗಳಿಂದ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದಳು. ಈ ಸಾಲ ತೀರಿಸಲು ಮತ್ತೆ ಬೇರೆ ಕಡೆಯಿಂದ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲಾರದಷ್ಟು ಸಂದಿಗ್ಧ ಪರಿಸ್ಥಿತಿಗೆ ಸಿಲುಕಿಕೊಂಡ ಅಮೃತಾ ಕ್ರಿಮಿನಲ್ ಐಡಿಯಾಗಳನ್ನು ಇಂಟರ್‍ನೆಟ್‍ನಲ್ಲಿ ಹುಡುಕುತ್ತಾ ತನ್ನ ಭವಿಷ್ಯವನ್ನೇ ಹಾಳುಮಾಡಿಕೊಂಡಿರುವುದು ವಿಷಾದಕರ.

ತಾನು ಸಾಲ ಮಾಡಿಕೊಂಡಿರುವುದು ತಾಯಿ ಹಾಗೂ ಸಹೋದರನಿಗೆ ಎಲ್ಲಿ ಗೊತ್ತಾಗುತ್ತೋ ಎಂಬ ಭಯ ಅಮೃತಾಳನ್ನು ಒಂದು ಕಡೆ ಕಾಡಿದರೆ, ಮತ್ತೊಂದೆಡೆ ಸಾಲಗಾರರು ಮನೆ ಬಳಿ ಬಂದು ಗಲಾಟೆ ಮಾಡಿದರೆ ತಾಯಿ-ಸಹೋದರನ ಮರ್ಯಾದೆಗೆ ಕುತ್ತು ಬರುತ್ತದೆಂಬುದು ಮತ್ತೊಂದೆಡೆ ಚಿಂತೆ. ಈ ಚಿಂತೆ ಅಮೃತಾಳನ್ನು ಎತ್ತ ಕಡೆ ಕರೆದೊಯ್ದಿತೆಂದರೆ ತಾಯಿ-ಸಹೋದರನ ಕೊಲೆ ಮಾಡಿದರೆ ಸಾಲದ ವಿಷಯ ಅವರಿಗೆ ಗೊತ್ತೇ ಆಗುವುದಿಲ್ಲ. ನಂತರ ತಾನು ಬೇರೆಕಡೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಲು ಅಮೃತಾ ನಿರ್ಧರಿಸಿದ್ದಳು.

ಅದರಂತೆ ಹಲವು ತಿಂಗಳುಗಳಿಂದ ಇಂಟರ್‍ನೆಟ್ ಜಾಲಾಡಿ ಅಪರಾಧ ಮಾಡಿದರೆ ಯಾವ ರೀತಿ ತಪ್ಪಿಸಿಕೊಳ್ಳಬಹುದೆಂಬ ಐಡಿಯಾಗಳನ್ನು ಹುಡುಕಿದ್ದಾಳೆ. ಅಮೃತಾರಂತಹವರು ಎಷ್ಟೇ ಚಾಲಾಕಿ ಐಡಿಯಾ ಹುಡುಕಿದರೂ ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ ಎಂಬುದಕ್ಕೆ ಈಕೆ ಸಿಕ್ಕಿಬಿದ್ದಿರುವುದೇ ಸಾಕ್ಷಿ. ಈ ಪ್ರಕರಣದಲ್ಲಿ ಅಮೃತಾ ಜತೆ ಸ್ನೇಹಿತ ಶ್ರೀಧರ್‍ರಾವ್ ಸಿಕ್ಕಿಕೊಂಡಿರುವುದು ದುರ್ದೈವ. ಇವರಿಬ್ಬರೂ ಅಂಡಮಾನ್‍ಗೆ ತೆರಳಲು ನಾಲ್ಕು ತಿಂಗಳ ಹಿಂದೆಯೇ ನಿರ್ಧರಿಸಿದ್ದರು. ಅಲ್ಲಿಗೆ ಹೋಗಲು ಇವರಿಬ್ಬರೂ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದು, ಸ್ವಲ್ಪ ಹಣವನ್ನೂ ತೀರಿಸಿರಲಿಲ್ಲ.

ಫೆ.2ರಂದು ಅಂದುಕೊಂಡಂತೆ ಅಂಡಮಾನ್‍ಗೆ ತೆರಳಲು ಸ್ನೇಹಿತ ಬ್ಯಾಗ್ ಪ್ಯಾಕ್‍ಮಾಡಿಕೊಂಡು ಈಕೆ ಮನೆ ಬಳಿ ಬಂದಾಗ ಅಮೃತಾ ತನ್ನ ತಾಯಿಯನ್ನು ಕೊಲೆ ಮಾಡಿ, ಸಹೋದರನಿಗೂ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿ ಅಲ್ಲಿಂದ ತಪ್ಪಿಸಿಕೊಂಡು ಸ್ನೇಹಿತನ ಬೈಕ್‍ನಲ್ಲಿ ತೆರಳಿದ್ದಳು. ವಿಪರ್ಯಾಸವೆಂದರೆ, ಅಮೃತಾ ತಾಯಿಯನ್ನು ಕೊಲೆ ಮಾಡಿ ಬಂದಿರುವ ವಿಷಯ ಸ್ನೇಹಿತನಿಗೆ ತಿಳಿಸಿರಲಿಲ್ಲ. ಅಂಡಮಾನ್‍ಗೆ ಹೋಗುವವರೆಗೂ ಗೊತ್ತೇ ಆಗಿಲ್ಲ.

ಪೊಲೀಸರು ಅಂಡಮಾನ್‍ಗೆ ಹೋಗಿ ಇವರಿಬ್ಬರನ್ನೂ ಬಂಧಿಸಿದ ನಂತರವಷ್ಟೇ ಅಮೃತಾ ತಾಯಿಯನ್ನು ಕೊಲೆ ಮಾಡಿರುವುದು ಗೊತ್ತಾಗಿ ಸ್ನೇಹಿತನೇ ಶಾಕ್ ಆಗಿದ್ದಾನೆ. ಈ ಪ್ರಕರಣದಿಂದಾಗಿ ಇದೀಗ ಇಬ್ಬರೂ ಜೈಲು ಸೇರುವಂತಾಯಿತು. ಅಮೃತಾ ಬಳಸುತ್ತಿದ್ದ ದುಬಾರಿ ಬೆಲೆಯ ಮೊಬೈಲ್ ನಾಪತ್ತೆಯಾಗಿದೆ. ಈಕೆ ಮೂರು ಮೊಬೈಲ್‍ಗಳನ್ನು ಬಳಸುತ್ತಿದ್ದಳೆಂಬುದು ತನಿಖೆಯಿಂದ ಗೊತ್ತಾಗಿದೆ.

ಅಂದು ಸ್ನೇಹಿತನ ಜತೆ ವಿಮಾನ ನಿಲ್ದಾಣಕ್ಕೆ ಬೈಕ್‍ನಲ್ಲಿ ಹೋಗುವಾಗ ಮಾರ್ಗಮಧ್ಯೆ ರಾಮಮೂರ್ತಿನಗರದ ಬ್ರಿಡ್ಜ್ ಬಳಿ ಬಿಸಾಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಮೊಬೈಲ್‍ಗಾಗಿ ಹುಡುಕಾಟ ನಡೆಸಿದರಾದರೂ ಪತ್ತೆಯಾಗಿಲ್ಲ. ಈ ಮೊಬೈಲ್ ದೊರೆತ ನಂತರ ಇನ್ನೂ ಹಲವು ಮಾಹಿತಿಗಳು ಬಯಲಿಗೆ ಬರಲಿವೆ. ಒಟ್ಟಾರೆ ದುಂದುವೆಚ್ಚ, ಐಷಾರಾಮಿ ಜೀವನಕ್ಕಾಗಿ ಸಾಲ ಮಾಡಿ ಅದನ್ನು ಮರೆಮಾಚಲು ಹೆತ್ತ ತಾಯಿಯನ್ನೇ ಮಗಳು ಕೊಲೆ ಮಾಡಿರುವುದು ಕ್ಷಮಿಸಲಾರದ ಅಪರಾಧ.