Sunday, July 20, 2025
Homeರಾಜ್ಯಮೆಟ್ರೊ ರೈಲು ನಿಲ್ದಾಣಗಳಲ್ಲಿ ನಂದಿನಿ ಬದಲಿಗೆ ಅಮೂಲ್‌ಗೆ ಅವಕಾಶ : ರೇಣುಕಾಚಾರ್ಯ ಆಕ್ರೋಶ

ಮೆಟ್ರೊ ರೈಲು ನಿಲ್ದಾಣಗಳಲ್ಲಿ ನಂದಿನಿ ಬದಲಿಗೆ ಅಮೂಲ್‌ಗೆ ಅವಕಾಶ : ರೇಣುಕಾಚಾರ್ಯ ಆಕ್ರೋಶ

Amul instead of Nandini at Bengaluru Metro stations?

ಬೆಂಗಳೂರು, ಜೂ.18- ಬೆಂಗಳೂರು ಮೆಟ್ರೊ ರೈಲು ನಿಲ್ದಾಣಗಳಲ್ಲಿ ಗುಜರಾತ್ ಸರ್ಕಾರದ ಅಮೂಲ್ ಮಳಿಗೆಗಳನ್ನು ತೆರೆಯುವ ಬದಲು ಕರ್ನಾಟಕದ ಹೆಮ್ಮೆಯ ನಂದಿನಿ ಬ್ರಾಂಡ್ ಮಳಿಗೆಗೆ ಅವಕಾಶ ನೀಡಬೇಕೆಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೆಟ್ರೊ ರೈಲ್ವೆ ಸ್ಟೇಷನ್‌ಗಳಲ್ಲಿ ಗುಜರಾತ್‌ನ ಅಮೂಲ್ ಮಳಿಗೆಗಳನ್ನು ತೆರೆಯಲು ಅವಕಾಶ ಕೊಟ್ಟಿರುವ ರಾಜ್ಯ ಸರ್ಕಾರದ ನಿರ್ಧಾರ ಕನ್ನಡಿಗರ ಭಾವನೆಗಳಿಗೆ ಹಾಗೂ ರಾಜ್ಯಕ್ಕೆ ಮಾಡಿ ಅವಮಾನ ಎಂದು ವಾಗ್ದಾಳಿ ನಡೆಸಿದರು. ಇಡೀ ದೇಶದಲ್ಲೇ ನಂದಿನಿ ಬ್ರಾಂಡ್ ಹೆಸರುವಾಸಿಯಾಗಿದೆ ದೇಶದಲ್ಲಿ ಇಂದು ಹೈನುಗಾರಿಕೆಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ ಎಂದರೆ ನಂದಿನಿ ಪಾತ್ರ ಅತ್ಯಂತ ಪ್ರಮುಖವಾಗಿದೆ. ಇದನ್ನು ಕಡೆಗಣಿಸಿ ಅಮೂಲ್‌ಗೆ ಮಣೆ ಹಾಕಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ನಂದಿನಿಯೊಂದಿಗೆ ಕನ್ನಡಿಗರ ಅವಿನಾಭಾವ ಸಂಬಂಧವಿದೆ. ಯಾರದೋ ಹಿತಾಸಕ್ತಿಗಾಗಿ ಇದನ್ನು ಕಡೆಗಣಿಸಿ ಅಮೂಲ್‌ಗೆ ಅವಕಾಶ ಕೊಡುವುದು ಸರಿಯಲ್ಲ. ತಕ್ಷಣವೇ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಕನ್ನಡಿಗರ ಆಕ್ರೋಶಕ್ಕೆ ಕಾಂಗ್ರೆಸ್ ಸರ್ಕಾರ ತುತ್ತಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.

ನಂದಿನಿ ಮಳಿಗೆಗಳಿಗೆ ಮೊದಲು ಬಿಎಂಆರ್‌ಸಿಯಡಿ ಅವಕಾಶ ಕೊಡಿ. ಹಿಂದೆ ನಮ್ಮ ಸರ್ಕಾರ ಅಮೂಲ್ ಹಾಲನ್ನು ಮಾರಾಟ ಮಾಡಲು ಅವಕಾಶ ಕೊಡಲಿದೆ ಎಂದು ರಾಜ್ಯದ ಜನತೆಯ ಮುಂದೆ ಸುಳ್ಳು ಹೇಳಿ ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದರು. ಈಗ ಅದೇ ಅಮೂಲ್‌ಗೆ ರತ್ನಗಂಬಳಿ ಹಾಕಿ ಕನ್ನಡಿಗರ ಬೆನ್ನಿಗೆ ಚೂರಿ ಹಾಕಲು ಹೊರಟಿದ್ದಾರೆ ಎಂದು ದೂರಿದರು.

ಅಮೂಲ್‌ಗೆ ಅವಕಾಶ ಮಾಡಿಕೊಟ್ಟು ನಮ್ಮ ರೈತರ ಹೊಟ್ಟೆ ಮೇಲೆ ಹೊಡೆಯಬಾರದು. ಟೆಂಡರ್ ಕರೆದಿದ್ದರೆ ತಕ್ಷಣವೇ ರದ್ದುಪಡಿಸಿ ನಂದಿನಿ ಮಳಿಗೆ ಹಾಕಲು ಅವಕಾಶ ಮಾಡಿಕೊಡಿ. ಅಮೂಲ್ ಜೊತೆ ಒಳ ಒಪ್ಪಂದ ಮಾಡಿಕೊಂಡಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಅವರು ಶಂಕೆ ವ್ಯಕ್ತಪಡಿಸಿದರು.

ಸರ್ಕಾರ ಬಿಕರಿ :
ವೃದ್ಧಾಪ್ಯವೇತನ ಸಂಧ್ಯಾ ಸುರಕ್ಷಾ ವೇತನ ಕಡಿತ ಮಾಡಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಖಂಡಿಸಿದ ರೇಣುಕಾಚಾರ್ಯ ಅವರು ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ವಾಗ್ದಾಳಿ ನಡೆಸಿದರು. ಗ್ಯಾರಂಟಿಗಳಿಗೆ ಹಣ ಹೊಂದಿಸಲು ಪರದಾಡುತ್ತಿರುವ ಸರ್ಕಾರ ಪಿಂಚಣಿ ಯೋಜನೆಗಳಾದ ವೃದ್ದಾಪ್ಯ ವೇತನ.

ಸಂಧ್ಯಾಸುರಕ್ಷ ವೇತನ ಕಡಿತ ಮಾಡಲು ಮುಂದಾಗಿರುವುದು ಸರ್ಕಾರದಲ್ಲಿ ಹಣ ಇಲ್ಲ ಎಂಬ ಮುನ್ಸೂಚನೆಯಾಗಿದೆ. ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ ಎಂದು ಹೇಳಿಕೊಳ್ಳುವ ಸರ್ಕಾರಕ್ಕೆ ಪಿಂಚಣಿ ಹಣ ಕೊಡುವ ಯೋಗ್ಯತೆ ಇಲ್ಲವೇ ಎಂದು ಪ್ರಶ್ನಿಸಿದರು. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ವೃದ್ದಾಪ್ಯ ಪಿಂಚಣಿಯನ್ನು ಹೆಚ್ಚಳ ಮಾಡಿದ್ದೇವೆ.

ಅನರ್ಹರ ಹೆಸರಿನಲ್ಲಿ ಪಿಂಚಣಿ ಕಡಿತ ಮಾಡುತ್ತಿರುವುದು ಸರಿಯಲ್ಲ. ಇದು ದರೋಡೆ ಸರ್ಕಾರ, ಲೂಟಿ ಸರ್ಕಾರ, ಹತ್ಯೆಕೋರ ಸರ್ಕಾರ ಎಂದು ಕಿಡಿಕಾರಿದರು. ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಗತಿಪಥ ಯೋಜನೆಯಲ್ಲಿ ಅನುದಾನ ತಾರತಮ್ಯ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಅನುದಾನ ತಾರತಮ್ಯ ಮಾಡಬಾರದು. ನಮ್ಮ ಸರ್ಕಾರ ಇದ್ದಾಗ ನಾವು ಮಲತಾಯಿ ಧೋರಣೆ ಮಾಡುತ್ತಿರಲಿಲ್ಲ. ಹೀಗಾದದರೆ ಈ ಸರ್ಕಾರ ಬಹಳ ದಿನ ಇರುವುದಿಲ್ಲ ಎಂದು ಎಚ್ಚರಿಸಿದರು.

ಸಿಎಂ-ಡಿಸಿಎಂ ನಡುವೆ ಸಂಘರ್ಷ ನಡೆಯುತ್ತಿದೆ. ಅನುದಾನ ಕಡಿಮೆ ಕೊಟ್ಟರೆ ಆ ಕ್ಷೇತ್ರದ ಜನತೆಗೆ ಅವಮಾನ ಮಾಡಿದಂತೆ. ಬಿಜೆಪಿ ಯಾವತ್ತೂ ಮಲತಾಯಿ ಧೋರಣೆ ಮಾಡಿಲ್ಲ ಎಂದು ಸಮರ್ಥಿಸಿಕೊಂಡ ಅವರು, ಸರ್ಕಾರ ಎಲ್ಲ ಕ್ಷೇತ್ರಗಳಿಗೂ ಸರ್ಕಾರ ತಾರತಮ್ಯ ಮಾಡದೇ ಸಮಾನ ಅನುದಾನ ಕೊಡಬೇಕು ಎಂದು ಒತ್ತಾಯಿಸಿದರು. ಕಾಲ್ತುಳಿತ ಪ್ರಕರಣದಲ್ಲಿ ಸಿಎಂ, ಡಿಸಿಎಂ ರಾಜೀನಾಮೆ ಕೊಡಬೇಕು. ವಿಜಯೋತ್ಸವ ಆಯೋಜನೆ ಪರಿಣಾಮ 11 ಅಮಾಯಕರ ಸಾವಾಗಿದೆ. ಘಟನೆಯ ನೈತಿಕ ಹೊಣೆ ಹೊತ್ತು ಮಂತ್ರಿಗಳು ರಾಜೀನಾಮೆ ಕೊಡಬೇಕು ಎಂದು ರೇಣುಕಾಚಾರ್ಯ ಒತ್ತಾಯಿಸಿದರು.

RELATED ARTICLES

Latest News