ಕೃಷ್ಣ( ಆಂಧ್ರಪ್ರದೇಶ), ಜ. 12- ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ಬಂದರೆ ದೇಶದ ಕೆಲವೆಡೆ ಸುಗ್ಗಿಯ ಸಂಭ್ರಮ, ಇದರೊಂದಿಗೆ ಪ್ರಾಣಿಗಳ ಕಾಳಗವು ಕೂಡ ಜೋರಾಗಿಯೇ ಇರುತ್ತದೆ, ತಮಿಳುನಾಡಿನಲ್ಲಿ ಜಲ್ಲಿಕಟ್ಟು , ಕರ್ನಾಟಕದಲ್ಲಿ ಕಂಬಳ ನಡೆದರೆ ಆಂಧ್ರಪ್ರದೇಶವು ಕೋಳಿ ಕಾಳಗಕ್ಕೆ ತುಂಬಾ ಪ್ರಸಿದ್ಧ.
ಈ ಬಾರಿಯೂ ಸಂಕ್ರಾಂತಿ ಹಬ್ಬಕ್ಕೆ ಕೋಳಿ ಕಾಳಗವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಪೊಲೀಸ್ ಇಲಾಖೆ ಘೋಷಿಸಿದ್ದರೂ ಕೂಡ ಖಾಕಿ ಕಣ್ತಪ್ಪಿಸಿ ಈ ಪಂದ್ಯ ನಡೆಸಲು ಸಜ್ಜಾಗಿದ್ದ ಖಚಿತ ಮಾಹಿತಿ ಆಧಾರಿಸಿದ ಪೊಲೀಸರು ನಾಲ್ವರು ಆಯೋಜಕರನ್ನು ಬಂಧಿಸಿ 1.20 ಲಕ್ಷ ರೂ. ಬೆಟ್ಟಿಂಗ್ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಆಂಧ್ರಪ್ರದೇಶದ ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಕೋಳಿ ಕಾಳಗಕ್ಕೆ ಪ್ರಸಿದ್ಧಿಯಾಗಿದ್ದು ಬಂಧಿತ ಆರೋಪಿಗಳು ಸಂಕ್ರಾಂತಿ ಹಬ್ಬದಂದು ಪಶ್ಚಿಮ ಗೋದಾವರಿಯ ಎಲ್ಲೂರಿನಲ್ಲಿ ಪಂದ್ಯ ಆಯೋಜಿಸಲು ಸಜ್ಜಾಗಿದ್ದರು. ಕೋಳಿ ಕಾಳಗಕ್ಕೆ ಸಾಕಷ್ಟು ಬೆಟ್ಟಿಂಗ್ ಕೂಡ ನಡೆಯಲಿದ್ದು ಪಂದ್ಯದಲ್ಲಿ ಪಾಲ್ಗೊಳ್ಳುವ ಎರಡು ಕೋಳಿಗಳ ಕಾಲುಗಳಿಗೆ ಅರಿತವಾದ ಬ್ಲೇಡ್‍ಗಳನ್ನು ಕಟ್ಟಲಾಗುತ್ತದೆ, ಕಾಲುಗಳ ಕಟ್ಟಿರುವ ಬ್ಲೇಡ್‍ನಿಂದ ಯಾವ ಕೋಳಿಗೆ ಹೆಚ್ಚು ಗಾಯಗಳಾಗುತ್ತ ವೆಯೋ ಅಥವಾ ಸಾಯುತ್ತದೆಯೋ ಅದರ ಆಧಾರದ ಮೇಲೆ ಗೆಲುವನ್ನು ಪರಿಗಣಿಸಿ ಗೆದ್ದ ಕೋಳಿಯ ಮಾಲೀಕನಿಗೆ ಬೆಟ್ಟಿಂಗ್ ಹಣವನ್ನು ನೀಡಲಾಗುತ್ತದೆ.
ಆದರೆ ಈ ಬಾರಿಯ ಸಂಕ್ರಾಂತಿ ಹಬ್ಬದ ವೇಳೆ ಕೋಳಿ ಕಾಳಗವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಪ್ರಕಾಶಂ ಜಿಲ್ಲೆಯ ಪೊಲೀಸರು ತಿಳಿಸಿದ್ದು, ಒಂದು ವೇಳೆ ಅಕ್ರಮವಾಗಿ ಈ ಪಂದ್ಯ ನಡೆಸಿದರೆ ಆಯೋಜಕರು ಹಾಗೂ ಪಾಲ್ಗೊಳ್ಳುವವರು ಹಾಗೂ ಬೆಟ್ಟಿಂಗ್ ಕಟ್ಟುವರ ಮೇಲೆ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಜಿಲ್ಲಾ ಎಸ್ಪಿ ಮಲ್ಲಿಕಾ ಗರ್ಗ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಂಕ್ರಾಂತಿಯ ಹಬ್ಬದ ವೇಳೆ ಕೋಳಿ ಪಂದ್ಯದೊಂದಿಗೆ ಕ್ಯಾಸಿನೋ, ಇಸ್ಪೀಟ್ ಸೇರಿದಂತೆ ಮತ್ತಿತರ ಕಾನೂನು ಬಾಹಿರ ಪಂದ್ಯಗಳನ್ನು ಸಂಪೂರ್ಣವಾಗಿ ನಿಷೇಸಲಾಗಿದ್ದು, ಒಂದು ವೇಳೆ ಇಂತಹ ಆಟಗಳಲ್ಲಿ ಸಾರ್ವಜನಿಕರು ಪಾಲ್ಗೊಂಡರೆ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಗರ್ಗ್ ಹೇಳಿದ್ದಾರೆ.
ಪೊಲೀಸ್ ಇಲಾಖೆಯ ಆದೇಶ ಮೀರಿ ಎಲ್ಲಾದರೂ ಕೋಳಿ ಪಂದ್ಯ, ಇಸ್ಪೀಟ್ ಮತ್ತಿತರ ಕಾನೂನುಬಾಹಿರ ಆಟಗಳು ಆಯೋಜನೆಯಾಗಿರುವುದು ಕಂಡುಬಂದರೆ ಸಾರ್ವಜನಿಕರು 9121102266 ನಂಬರ್‍ಗೆ ಕರೆ ಮಾಡಿ ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಗರ್ಗ್ ಹೇಳಿದ್ದಾರೆ.
