ಆಂಧ್ರದ ಸಚಿವ ಗೌತಮ್‍ರೆಡ್ಡಿ ವಿಧಿವಶ

Social Share

ಅಮರಾವತಿ,ಫೆ.21- ಆಂಧ್ರಪ್ರದೇಶದ ಕೈಗಾರಿಕೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಮೆಕಪಾಟಿ ಗೌತಮ್ ರೆಡ್ಡಿ ಅವರು ಇಂದು ಬೆಳಗ್ಗೆ ಹೈದರಾಬಾದ್‍ನಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ಅವರ ನಿಟಕವರ್ತಿಯೊಬ್ಬರು ತಿಳಿಸಿದ್ದಾರೆ.50 ವರ್ಷ ವಯಸ್ಸಿನ ರೆಡ್ಡಿ ಅವರು, ಪತ್ನಿ, ಓರ್ವ ಪುತ್ರಿ ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.
ಗೌತಮ್ ರೆಡ್ಡಿ ಅವರು ದುಬೈನಲ್ಲಿ 10 ದಿನಗಳನ್ನು ಕಳೆದ ತರುವಾಯ ಎರಡು ದಿನಗಳ ಹಿಂದೆಯಷ್ಟೇ ಹೈದಾರಾಬಾದ್‍ಗೆ ಹಿಂತಿರುಗಿದ್ದರು. ದುಬೈ ಎಕ್ಸ್ ಪೋನಲ್ಲಿ ಆಂಧ್ರ ಪ್ರದೇಶದ ಕೈಗಾರಿಕಾ ಇಲಾಕೆ ರಾಜ್ಯಕ್ಕೆ ಹೂಡಿಕೆದಾರರನ್ನು ಆಕರ್ಷಿಸುವುದಕ್ಕಾಗಿ ಮಳಿಗೆಯೊಂದನ್ನು ಸ್ಥಾಪಿಸಿತ್ತು.
ಗೌತಮ್ ರೆಡ್ಡಿ ಅವರು ಮಾಜಿ ಸಂಸದ ಮೆಕಪಾಟಿ ರಾಜಮೋಹನ್ ರೆಡ್ಡಿ ಅವರ ಪುತ್ರ. ರೆಡ್ಡಿ ಅವರು ಸ್ವಂತ ಊರು ಎಸ್‍ಪಿಎಸ್ ನೆಲ್ಲೂರು ಜಿಲ್ಲೆಯಲ್ಲಿನ ಆತ್ಮಕುರು ಕ್ಷೇತ್ರದಿಂದ 2014ರಲ್ಲಿ ಮೊದಲ ಬಾರಿ ವಿಧಾನಸಭೆಗೆ ಚುನಾಯಿತರಾದರು. 2019ರಲ್ಲಿ ಪುನರಾಯ್ಕೆಗೊಂಡ ಅವರು ಪ್ರಥಮ ವೈಎಸ್‍ಆರ್ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾದರು.
ಮುಖ್ಯಮಂತ್ರಿ ಜಗನ್ಮೋಹನ್‍ರೆಡ್ಡಿ, ಅವರ ಸಂಪುಟ ಸಹೋದ್ಯೋಗಿಗಳು, ತೆಲುಗು ದೇಶಂ ರಾಜ್ಯಾಧ್ಯಕ್ಷ ಕೆ.ಅಚ್ಚನ್‍ನಾಯ್ಡು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ವಿಷ್ಣುವರ್ಧನ್ ರೆಡ್ಡಿ, ಮಾಜಿ ಸಚಿವ ಆಣಂ ರಾಮನಾರಾಯಣ ರೆಡ್ಡಿ ಮತ್ತು ಇನ್ನೂ ಅನೇಕ ಗಣ್ಯರು ಗೌತಮ್‍ರೆಡ್ಡಿ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

Articles You Might Like

Share This Article