ಆಂಧ್ರ ಬಸ್‌ಗೆ ಶಿವಮೊಗ್ಗದ ನೊಂದಣಿ ಸಂಖ್ಯೆ ಬಳಸಿ ವಂಚನೆ : ಖಾಸಗಿ ಬಸ್ ಜಪ್ತಿ

Social Share

ಬೇಲೂರು,ಅ.19- ನೊಂದಣಿ ಸಂಖ್ಯೆ ಬದಲಾಯಿಸಿ ಪ್ರವಾಸಿಗರನ್ನು ಬೇಲೂರಿಗೆ ಕರೆತಂದಿದ್ದ ಖಾಸಗಿ ಬಸನ್ನು ಸಕಲೇಶಪುರದ ಸಹಾಯಕ ಪ್ರಾದೇಶಿಕ ಮೋಟಾರು ವಾಹನ ನಿರೀಕ್ಷಕ ಪದ್ಮನಾಭನ್ ವಶಕ್ಕೆ ಪಡೆದಿದ್ದಾರೆ.

ಆಂಧ್ರಪ್ರದೇಶದ ನೊಂದಣಿ ಸಂಖ್ಯೆ ಹೊಂದಿರುವ ಖಾಸಗಿ ಬಸ್ಸಿಗೆ ಶಿವಮೊಗ್ಗದ ನೊಂದಣಿ ಸಂಖ್ಯೆ ಹಾಕಿಕೊಂಡು ಬಳ್ಳಾರಿಯಿಂದ ಪ್ರವಾಸಿಗರನ್ನು ಬೇಲೂರು ದೇಗುಲ ವೀಕ್ಷಣೆಗೆ ಕರೆತಂದು ಇನ್ನೇನು ಪ್ರವಾಸಿಗರನ್ನು ಬಸ್ಸಿಗೆ ಹತ್ತಿಸಿಕೊಂಡು ಹಯೊರಡಬೇಕು ಎನ್ನುವಷ್ಟರಲ್ಲಿ ಅಲ್ಲಿಗೆ ಆಗಮಿಸಿದ ಸಕಲೇಶಪುರದ ಸಹಾಯಕ ಪ್ರಾದೇಶಿಕ ಮೋಟಾರು ವಾಹನ ನಿರೀಕ್ಷಕ ಪದ್ಬನಾಭನ್ ದೇಗುಲ ಸಮೀಪ ವಾಹನಗಳನ್ನು ವೀಕ್ಷಿಸಿ ಅನುಮಾನಗೊಂಡು ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಆಂಧ್ರಪ್ರದೇಶದ ನೊಂದಣಿ ಸಂಖ್ಯೆಯ ಬಸ್ಸಿನ ನಂಬರ್ ಮೇಲೆ ಕರ್ನಾಟಕದ ನೊಂದಣಿ ಸಂಖ್ಯೆಹೊಂದಿರುವ ಸ್ಟಿಕರ್ ಅಂಟಿಸಿ ಸುಳ್ಳು ದಾಖಲೆಯೊಂದಿಗೆ ಪ್ರವಾಸಿಗರನ್ನು ಬಸ್ಸಿನಲ್ಲಿ ಕರೆತಂದಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ವಾಹನವನ್ನು ವಶಕ್ಕೆ ಪಡೆದು ಬೇಲೂರು ಪೊಲೀಸರ ವಶಕ್ಕೆ ನೀಡಿದ್ದಾರೆ.

ಪ್ರವಾಸಿಗರಿಗೆ ಯಾವುದೆ ತೊಂದರೆ ಹಾಗದಂತೆ ಅಧಿಕಾರಿಗಳು ಬೇರೊಂದು ವಾಹನವನ್ನು ಕರೆಸಿ ಪ್ರವಾಸಿಗರನ್ನು ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ. ಬಸ್ಸಿನ ಚಾಲಕ ಮತ್ತು ನಿರ್ವಾಹಕರಿಂದ ಹೇಳಿಕೆ ಪಡೆದ ನಂತರ ಸಕಲೇಶಪುರ ಸಹಾಯಕ ಪ್ರಾದೇಶಿಕ ಕಚೇರಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.

Articles You Might Like

Share This Article