ಬೆಂಗಳೂರು, ಮಾ.9- ಪಶುಸಂಗೋಪನಾ ಸಚಿವರು ಕೆಲಸ ಮಾಡದೆ ಇದ್ದರೂ ಎಲ್ಲವನ್ನೂ ನಾನೇ ಮಾಡಿದ್ದೇನೆ. ಎಲ್ಲವೂ ನನಗೆ ಗೋತ್ತು ಎಂಬ ದರ್ಪ ಪ್ರದರ್ಶನ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತ ಪಡಿಸಿದರೆ, ಆಡಳಿತ ಪಕ್ಷದ ಸದಸ್ಯರು ಸಚಿವರ ವಿರುದ್ಧ ಅಸಮದಾನ ಪ್ರದರ್ಶನ ಮಾಡಿದ್ದ ಪ್ರಸಂಗ ವಿಧಾನ ಪರಿಷತ್ ನಲ್ಲಿ ನಡೆಯಿತು.
ಪ್ರಶ್ನೋತ್ತರದ ವೇಳೆ ಬಿಜೆಪಿಯ ಸದಸ್ಯ ಸುನೀಲ್ ವಲ್ಯಾಪುರ್. ರಾಜ್ಯದಲ್ಲಿ ಮಂಜೂರಾದ ಒಟ್ಟು ಪಶುವೈದ್ಯಾಕಾರಿಗಳ ಸಂಖ್ಯೆ ಎಷ್ಟು, ಎಷ್ಟು ಜನ ಕೆಲಸ ಮಾಡುತ್ತಿದ್ದಾರೆ, ಖಾಲಿ ಎಷ್ಟಿವೆ ಎಂದು ಪ್ರಶ್ನಿಸಿದರು.
ಅದಕ್ಕೆ ಉತ್ತರ ನೀಡಿದ ಸಚಿವ ಪ್ರಭು ಬಿ.ಚವ್ಹಾಣ್, ರಾಜ್ಯದಲ್ಲಿ 1602 ಪಶುವೈದ್ಯಾಧಿಕಾರಿ ಹುದ್ದೆಗಳು ಮಂಜೂರಾಗಿದ್ದವು, 559 ಮಂದಿ ಕೆಲಸ ಮಾಡುತ್ತಿದ್ದು, 1043 ಹುದ್ದೆಗಳು ಖಾಲಿ ಇವೆ. ಹಿರಿಯ ಪಶುವೈದ್ಯಾಧಿಕಾರಿ ಹುದ್ದೆಗಳ ಪೈಕಿ ಒಂದು ಸಾವಿರ ಮಂಜೂರಾಗಿ, 832 ಮಂದಿ ಕೆಲಸ ಮಾಡುತ್ತಿದ್ದಾರೆ. 168 ಹುದ್ದೆಗಳು ಖಾಲಿ ಇವೆ. ಮುಖ್ಯಪಶುವೈದ್ಯಾಕಾರಿಗಳ ಹುದ್ದೆಯ ಪೈಕಿ 715 ಮಂಜೂರಾಗಿದ್ದು, ಪೂರ್ತಿ ಭರ್ತಿ ಇವೆ. ಹಿರಿಯ ಪಶುವೈದ್ಯಕೀಯ ಪರೀಕ್ಷಕರ 1825 ಹುದ್ದೆಗಳು ಮಂಜೂರಾಗಿದ್ದವು, 1295 ಮಂದಿ ಕೆಲಸ ಮಾಡುತ್ತಿದ್ದು, 530 ಖಾಲಿ ಇವೆ.
ಪಶು ವೈದ್ಯಕೀಯ ಪರೀಕ್ಷಕರ 1847 ಹುದ್ದೆಗಳು ಮಂಜೂರಾಗಿದ್ದು, 1307 ಮಂದಿ ಕೆಲಸ ಮಾಡುತ್ತಿದ್ದಾರೆ, 540 ಹುದ್ದೆಗಳು ಖಾಲಿ ಇವೆ. ಕಿರಿಯ ಪಶುವೈದ್ಯಕೀಯ ಪರೀಕ್ಷಕರ ಹುದ್ದೆಗಳ ಪೈಕಿ 2144 ಮಂಜೂರಾಗಿ, 1182 ಮಂದಿ ಕೆಲಸ ಮಾಡುತ್ತಿದ್ದರೆ 962 ಖಾಲಿ ಇವೆ. ಒಟ್ಟು 9133 ಮಂಜೂರಾದ ಹುದ್ದೆಗಳಲ್ಲಿ 5890 ಮಂದಿ ಕೆಲಸ ಮಾಡುತ್ತಿದ್ದು, 3243 ಹುದ್ದೆಗಳು ಖಾಲಿ ಇವೆ ಎಂದು ವಿವರಿಸಿದರು.
ಎರವಲು ಸೇವೆಯ ಮೇಲೆ ಬೇರೆ ಇಲಾಖೆಗೆ ಹೋಗಿದ್ದ ಪಶು ವೈದ್ಯಾಧಿಕಾರಿಗಳನ್ನು ವಾಪಾಸ್ ಕರೆಸಿಕೊಳ್ಳಲಾಗಿದೆ. ಬಹುತೇಕ ಎಲ್ಲರೂ ಬಂದಿದ್ದಾರೆ. ಇನ್ನೂ ಮೂರು ಮಂದಿ ಬರಬೇಕಿದ್ದು ಅವರಿಗೂ ನೋಟಿಸ್ ನೀಡಲಾಗಿದೆ. ಮಾತೃ ಇಲಾಖೆಗೆ ವಾಪಾಸ್ ಬರದೆ ಇದ್ದರೆ ಅಮಾನತುಗೊಳಿಸುವುದಾಗಿ ಎಚ್ಚರಿಸಿದರು.
ಗೋ ಮಾತೆ ನಮ್ಮ ಮಾತೇ. ಅದರ ರಕ್ಷಣೆಗೆ ತಾವು ಬದ್ಧರಾಗಿದ್ದು ಅಗತ್ಯ ಎಲ್ಲಾ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ಹೇಳಿದಾಗ, ಬಹಳಷ್ಟು ಮಂದಿ ಒಒಡಿ ಸೇವೆಯ ಮೇಲೆ ಬೇರೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಕಾಲಮಿತಿಯಲ್ಲಿ ಕರೆಸಿಕೊಳ್ಳುವಂತೆ ಒತ್ತಾಯಿಸಿದರು. ಆಗ ಮಧ್ಯ ಪ್ರವೇಶಿಸಿದ ಸಭಾಪತಿ ಅವರು ಬಹಳಷ್ಟು ಪಶುವೈದ್ಯಾಕಾರಿಗಳು ಒಒಡಿ ಮೇಲೆ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಕಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ವಾಪಸ್ ಕರೆಸಿಕೊಳ್ಳಿ ಎಂದು ಸಲಹೆ ನೀಡಿದರು.
ಕರೆಸಿಕೊಳ್ಳುತ್ತೇನೆ, ಯಾರನ್ನು ಬಿಡುವುದಿಲ್ಲ ಎಂದಾಗ ಎಷ್ಟು ಕಾಲದಲ್ಲಿ ಕರೆಸಿಕೊಳ್ಳಲಾಗುವುದು ಎಂದು ಸದಸ್ಯರು ಪ್ರಶ್ನಿಸಿದರು. ಆದರೆ ಸಚಿವರ ಉತ್ತರ ಸಮಾಧಾನ ತರದ ಹಿನ್ನೆಲೆಯಲ್ಲಿ ಸದಸ್ಯರು ಅಸಮದಾನಗೊಂಡು ಪಟ್ಟು ಹಿಡಿದರು. ಕೊನೆಗೆ ಸಭಾಪತಿ ಸಮಾದಾನ ಪಡಿಸಿದರು.
ಇನ್ನೂ ಕಾಂಗ್ರೆಸ್ ಸದಸ್ಯ ಅರವಿಂದ ಕುಮಾರ್ ಅರಳಿ, ಬೀದರ್ ಪಶು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಬೋಧಕ ವರ್ಗದಲ್ಲಿ 688 ಹುದ್ದೆಗಳು ಮಂಜೂರಾದವು, 290 ಮಂದಿ ಕೆಲಸ ಮಾಡುತ್ತಿದ್ದಾರೆ. 398 ಹುದ್ದೆಗಳು ಖಾಲಿ ಇವೆ. ಎಬಿಸಿಡಿ ವರ್ಗಕ್ಕೆ 1393 ಹುದ್ದೆಗಳು ಮಂಜೂರಾಗಿದ್ದವು, 320 ಮಂದಿ ಕೆಲಸ ಮಾಡುತ್ತಿದ್ದು, 1073 ಹುದ್ದೆಗಳು ಖಾಲಿ ಇವೆ ಎಂದರು.
ಇದಕ್ಕೆ ತೀವ್ರ ಅಸಮದಾನ ವ್ಯಕ್ತ ಪಡಿಸಿದ ಸದಸ್ಯರು, ಕಳೆದ ಅವೇಶನದಲ್ಲೂ ಈ ಕುರಿತು ನಾನು ಪ್ರಶ್ನೆ ಕೇಳಿದೆ, ಆಗ ಶೀಘ್ರವೇ ಭರ್ತಿ ಮಾಡಿಕೊಡುವುದಾಗಿ ಸಚಿವರು ಭರವಸೆ ನೀಡಿದರು. ಕಂದಾಯ ಸಚಿವ ಆರ್.ಅಶೋಕ್ ಕೂಡ ಅದಕ್ಕೆ ಸಾಕ್ಷಿಯಾಗಿದ್ದರು . ಇಷ್ಟೊಂದು ಹುದ್ದೆಗಳನ್ನು ಖಾಲಿ ಇಟ್ಟು ಯಾವ ಗುಣಮಟ್ಟದ ಶಿಕ್ಷಣ ಕೊಡಲು ಸಾಧ್ಯ. ಗೋವು ನಮ್ಮ ಮಾತೆ ಎಂದು ಹೇಳುವ ನೀವು ಗೋವುಗಳ ಚಿಕಿತ್ಸೆ ಕಲಿಸುವ ವಿಶ್ವವಿದ್ಯಾಲಯವನ್ನು ಇಷ್ಟು ದುಸ್ಥಿತಿಯಲ್ಲಿ ಇಟ್ಟಿರುವುದೇಕೆ ಎಂದು ಕಿಡಿಕಾರಿದರು. 226 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ.
ಉಳಿದ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲಾಗುವುದು ಎಂದು ಹೇಳಿದ ಸಚಿವರು, ಗೋವು ರಕ್ಷಣೆಗೆ ಬದ್ಧ ಎಂದಾಗ, ಸಚಿವರ ಧೋರಣೆಯನ್ನು ಸದಸ್ಯ ಅರಳಿ ಆಕ್ಷೇಪ ವ್ಯಕ್ತ ಪಡಿಸಿದರು. ಇದರಿಂದ ಕೆಲಕಾಲ ಮಾತಿನಚಕಮಕಿ ನಡೆಯಿತು. ವಿಶ್ವವಿದ್ಯಾಲಯವನ್ನು ಯಾವ ಕಾರಣಕ್ಕೂ ಸ್ಥಳಾಂತರ ಮಾಡುವುದಿಲ್ಲ ಎಂದು ಸಚಿವ ಅಶೋಕ್ ಸ್ಪಷ್ಟನೆ ನೀಡಿದರು.
