ಪ್ರಾಣಿಗಳ ಮೇಲಿನ ದೌರ್ಜನ್ಯಕ್ಕೆ ಜೈಲು ಶಿಕ್ಷೆ

Social Share

ಬೆಂಗಳೂರು, ಸೆ.29- ಪ್ರಾಣಿಗಳ ಮೇಲಿನ ದೌರ್ಜನ್ಯ ಕಂಡು ಬಂದಲ್ಲಿ ಜೈಲು ಶಿಕ್ಷೆ ವಿಧಿಸುವುದಾಗಿ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಎಚ್ಚರಿಕೆ ನೀಡಿದೆ. ರಾಜ್ಯಾದ್ಯಂತ ಪ್ರಾಣಿಗಳ ಮೇಲೆ ದೌರ್ಜನ್ಯ ಮತ್ತು ಕ್ರೌರ್ಯಗಳು ನಡೆಸುತ್ತಿರುವ ಪ್ರಕರಣಗಳು ಸಾಮಾಜಿಕ ಜಾಲತಾಣಗಳ ಮೂಲಕ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಗೆ ವರದಿಯಾಗುತ್ತಿದೆ.

ಬೀದಿ ನಾಯಿಗಳ ಆರೈಕೆದಾರರು, ಪೀಡರ್ಸ್‍ಗಳಿಗೆ ಕಿರುಕುಳ ಮತ್ತು ಅನ್ಯಾಯಕ್ಕೆ ಒಳಗಾಗುತ್ತಿರುವ ಬಗ್ಗೆ ವಿವಿಧ ದೂರುಗಳು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಗೆ ಸ್ವೀಕೃತಗೊಂಡಿವೆ ಎಂದು ಪ್ರಾಣಿ ಕಲ್ಯಾಣ ಮಂಡಳಿ ಪ್ರಕಟಣೆ ತಿಳಿಸಿದೆ.

ಇತ್ತೀಚೆಗೆ ಬೆಳಗಾವಿ, ಬಳ್ಳಾರಿ ಮತ್ತು ವಿಜಯಪುರ ಜಿಲ್ಲಾಗಳಲ್ಲಿ ಈ ರೀತಿಯ ಪ್ರಕರಣಗಳು ದಾಖಲಾಗಿದೆ. ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ 1960ರ ಪ್ರಕಾರ ಪ್ರಾಣಿಗಳಿಗೆ ನೋವು, ಯಾತನೆ, ತೊಂದರೆ/ದೌರ್ಜನ್ಯ ಮಾಡುವುದು ನಿಷಿದ್ಧ. ಭಾರತೀಯ ದಂಡ ಸಂಹಿತೆ ಅನುಚ್ಛೇದ 428 ಮತ್ತು 429ರ ಪ್ರಕಾರ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು ಎಂದು ಹೇಳಿದೆ.

ಬೀದಿ ನಾಯಿಗಳನ್ನು ಹೊಡೆಯುವುದು ಓಡಿಸುವುದು, ಎಸೆಯುವುದು ಮತ್ತು ಕೊಲ್ಲುವುದು ಶಿಕ್ಷಾರ್ಹ ಅಪರಾಧ. ಆದರೆ ಪ್ರಾಣಿಗಳ ಜನನ ನಿಯಂತ್ರಣ (ನಾಯಿ) ನಿಯಮ 2001ರನ್ವಯ ಪ್ರಾಣಿ ಸಂತಾನಹರಣ ಚಿಕಿತ್ಸೆಗೆ ಒಳಪಡಿಸಿದ ನಂತರ ಲಸಿಕೆ ನೀಡಿ, ಅವುಗಳ ಮೂಲಸ್ಥಾನಕ್ಕೆ ಬಿಡುವುದು. ಬೀದಿ ನಾಯಿಗಳು, ಬಿಡಾಡಿ ಧನಗಳಿಗೆ ಆರೈಕೆ ಮಾಡುವುದು, ಆಹಾರ ನೀಡುವುದು ಹಾಗೂ ಕರುಣೆ ತೋರುವುದು ಸಂವಿಧಾನದ ಪ್ರಕಾರ ನಾಗರಿಕರ ಜವಾಬ್ದಾರಿಯಾಗಿದೆ.

ಪ್ರಾಣಿಗಳ ಮೇಲಿನ ಎಲ್ಲಾ ದೌರ್ಜನ್ಯಗಳನ್ನು ದಾಖಲು ಮಾಡಿ, ನಿಯಮಾನುಸಾರ ಕ್ರಮ ಕೈಗೊಳ್ಳುತ್ತಿದ್ದು, ಸಾರ್ವಜನಿಕರು ಈ ಬಗ್ಗೆ ಜಾಗೃತರಾಗಿರಲು ತಿಳಿಸಿದೆ. ಈ ಬಗ್ಗೆ ಯಾವುದೇ ದೂರುಗಳಿದ್ದಲ್ಲಿ ಸಾರ್ವಜನಿಕರು ಪೊಲೀಸ್ ಕಂಟ್ರೋಲ್ ರೂಂ.112 ಅಥವಾ ಪಶುಸಂಗೋಪನಾ ಸಹಾಯವಾಣಿ ಸಂಖ್ಯೆ 8277100200 ಗೆ ಸಂಪರ್ಕಿಸುವಂತೆ ಕೋರಲಾಗಿದೆ.

Articles You Might Like

Share This Article