ನಿಮ್ಮ ಹತ್ರ ಉತ್ತರ ಇದೆಯಾ..? : ಬಿಜೆಪಿ ವಿರುದ್ಧ ಕಾಂಗ್ರೆಸ್ ಅಭಿಯಾನ

Social Share

ಬೆಂಗಳೂರು, ಆ.29- ಬಿಜೆಪಿ ಸರ್ಕಾರದ ವೈಫಲ್ಯಗಳು, ಸುಳ್ಳುಗಳನ್ನು ಪ್ರಶ್ನಿಸಿ ನಿಮ್ಮ ಬಳಿ ಉತ್ತರ ಇದೆಯಾ ಎಂಬ ಅಭಿಯಾನವನ್ನು ಕಾಂಗ್ರೆಸ್ ಆರಂಭಿಸಿದೆ. ಇಂದಿನಿಂದ ಬಿಜೆಪಿ ಸರ್ಕಾರಕ್ಕೆ ಪ್ರತಿದಿನ ಒಂದೊಂದು ಪ್ರಶ್ನೆ ಕೇಳಲಾರಂಭಿಸಲಾಗುವುದು. ಬಿಜೆಪಿ ಪ್ರಣಾಳಿಕೆಯಲ್ಲಿ 600 ಭರವಸೆಗಳನ್ನು ನೀಡಲಾಗಿತ್ತು. ಅವುಗಳ ಈಡೇರಿಕೆ, ಭ್ರಷ್ಟಾಚಾರ, ಹಗರಣ, ವೈಫಲ್ಯಗಳು ಹಾಗೂ ವಿವಾದಗಳ ಕುರಿತು ಪ್ರಶ್ನೆ ಮಾಡಲು ಕಾಂಗ್ರೆಸ್ ಆರಂಭಿಸಿದೆ.

ಕೆಪಿಸಿಸಿಯಲ್ಲಿ ಕಚೇರಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ನಾಯಕರು ಪತ್ರಿಕಾಗೋಷ್ಠಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ಬಿಜೆಪಿಯ ಅಸಲಿ ಹೆಸರು ಸುಳ್ಳಿನ ಪಾರ್ಟಿ ಎಂದು. ಬಿಜೆಪಿ ಅಂದರೆ ಬಿಗ್ ಟ್ರೇಡ್ ಜನತಾ ಪಾರ್ಟಿ, ಬಿಜೆಪಿ ಎಂದರೆ ಬೇಕೂಫ್ ಜನತಾ ಪಾರ್ಟಿ ಎಂದು ಲೇವಡಿ ಮಾಡಿದರು.

ಬಿಜೆಪಿ ನಿಮ್ಮ ಹತ್ತಿರ ಇದ್ಯಾ..? ಉತ್ತರ ಅಭಿಯಾನವನ್ನು ನಮ್ಮ ಪಕ್ಷದಿಂದಲೇ ನಡೆಸಲಾಗುವುದು. ಚುನಾವಣೆಗೆ ಏಳೆಂಟು ತಿಂಗಳು ಇದೆ. ಅಲ್ಲಿಯವರೆಗೆ ನಾವು ಪ್ರಶ್ನೆಗಳನ್ನು ಕೇಳುತ್ತೇವೆ. ಇದೇ ಪ್ರಶ್ನೆಗಳನ್ನಿಟ್ಟುಕೊಂಡು ಜನರ ಮುಂದೆ ಹೋಗ್ತೇವೆ ಎಂದು ಹೇಳಿದರು.

ಬಿಜೆಪಿ ಸರ್ಕಾರದಲ್ಲಿ ಮಠಗಳಿಂದ ಶೇ.30ರಷ್ಟು, ಗುತ್ತಿಗೆದಾರರಿಂದ ಶೇ.40ರಷ್ಟು ಕಮಿಷನ್ ಪಡೆಯಲಾಗುತ್ತಿದೆ. ಬಿಜೆಪಿ ಕಾರ್ಯಕರ್ತರಿಗೆ ಶೇ.50 ಇದೆ. ವಿವಿಧ ಹಂತಗಳಲ್ಲಿ ಕಮಿಷನ್ ದಂಧೆ ನಡೆಯುತ್ತಿದೆ. ದೇಶದಲ್ಲೇ ಇದು ದೊಡ್ಡ ಭ್ರಷ್ಟಾಚಾರದ ರಾಜ್ಯವಾಗಿದೆ. ಇಲ್ಲಿ ಬಿಜೆಪಿ ನಾಯಕತ್ವ ಬಿದ್ದು ಹೋಗಿದೆ ಎಂದು ಆರೋಪಿಸಿದರು.

ಯಡಿಯೂರಪ್ಪ ಜನರಿಗೆ ವಚನ ಕೊಟ್ಟಿದ್ದರು, ನಾವು ಬಿಜೆಪಿಯವರಿಗೆ ಪ್ರಶ್ನೆ ಕೇಳ್ತೇವೆ. ಕೊಟ್ಟ ವಚನ ಈಡೇರಿಸಿದ್ದಾರಾ, ನಿಮ್ಮ ಆತ್ಮ ಸಾಕ್ಷಿ ಮೂಲಕ ಉತ್ತರ ಕೊಡಿ. 100 ಬಾರಿ ಸುಳ್ಳು ಹೇಳಿ ನಿಜ ಮಾಡಿದಂತಲ್ಲ ಇದು. ಸುಳ್ಳು ಹೇಳಬೇಕು ಎಂದು ಕಾರ್ಯಕರ್ತರಿಗೆ ಈಶ್ವರಪ್ಪನವರೇ ಹೇಳಿಕೊಟ್ಟಿದ್ದಾರೆ. ನಿಮ್ಮ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಈಡೇರಿಸಿದ್ದೀರಾ ? ನೀವು ನುಡಿದಂತೆ ನಡೆಯಲಿಲ್ಲ, ವಚನ ಭ್ರಷ್ಟರಾಗಿದ್ದೀರಾ ಎಂದು ಟೀಕಿಸಿದ ಅವರು, ಪ್ರತಿದಿನ ಒಂದೊಂದು ಪ್ರಶ್ನೆ ನಾವು ಕೇಳ್ತೇವೆ ಎಂದರು.

ರೈತರಿಗೆ ಕೊಟ್ಟ ಮಾತು ಉಳಿಸಿಕೊಂಡ್ರಾ? ರೈತರ ಆದಾಯ ಡಬಲ್ ಎಂದ ಪ್ರಧಾನಿಯವರು ಎಲ್ಲಿ ಪರಿಶಿಷ್ಟರಿಗೆ 4500 ಕೋಟಿ ಕೊಡ್ತೇವೆ ಎಂದು ಭರವಸೆ ನೀಡಲಾಗಿತ್ತು ಅದು ಎಲ್ಲಿ ಎಂದು ಪ್ರಶ್ನಿಸಿದರು.

Articles You Might Like

Share This Article