ಬೆಂಗಳೂರು,ಸೆ.16-ಮತಾಂತರ ನಿಷೇಧ ಕಾಯ್ದೆ ವೈಯಕ್ತಿಕ ಸ್ವಾತಂತ್ರ ಹರಣವಾಗಲಿದ್ದು, ಇಂತಹ ವಿವಾದಾತ್ಮಕ ಕಾಯ್ದೆಗಳನ್ನು ತಂದು ಗೊಂದಲ ಮೂಡಿಸುತ್ತಿದ್ದಾರೆ. ನಾವು ಶೀಘ್ರವೇ ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆ ಧರ್ಮ ಸೇರಲು ಅರ್ಜಿ ಹಾಕಿ ವೈಯಕ್ತಿಕ ಮಾಹಿತಿ ನೀಡಬೇಕು. ಆ ಮಾಹಿತಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸುತ್ತಾರೆ. ಇದರಿಂದ ವೈಯಕ್ತಿಕ ಮಾಹಿತಿ ಸೋರಿಕೆಯಾಗುವುದಿಲ್ಲವೇ? ಕಾನೂನು ಇಲಾಖೆ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಪ್ರಕರಣದಲ್ಲಿ ವೈಯಕ್ತಿಕ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವುದಕ್ಕೆ ಅವಕಾಶವಿಲ್ಲ. ಸರ್ಕಾರಕ್ಕೆ ಇದು ಗೊತ್ತಾಗುವುದಿಲ್ಲವೇ, ಗುಜರಾತ್ ಮಾದರಿ ಎಂದು ಹೇಳುತ್ತಾರೆ. ಗುಜರಾತ್‍ನಲ್ಲಿ ಕಾಯ್ದೆಯ ಸೆಕ್ಷನ್3ಕ್ಕೆ ತಡೆಯಾಜ್ಞೆ ಇದೆ. ಇದರಿಂದ ಅಂತರ್ಜಾತಿ ವಿವಾಹಕ್ಕೂ ಹಿನ್ನಡೆಯಾಗಲಿದೆ.
ಇದನ್ನೂ ಓದಿ : ಮತಾಂತರದ ಮೂಲಕ ಧರ್ಮ ಹಿಂದೂ ಒಡೆಯಲಾಗುತ್ತಿತ್ತು : ಅರಗ ಜ್ಞಾನೇಂದ್ರ
ಮತಾಂತರವಾಗುವ ವ್ಯಕ್ತಿಯ ಸಂಬಂಧಿಕರು ದೂರು ನೀಡಿದರೆ ಕೇಸ್ ದಾಖಲಿಸುತ್ತಾರಂತೆ. ಹೀಗಾಗಿ ಮತಾಂತರ ನಿಷೇಧ ವಿಧೇಯಕ ಧಾರ್ಮಿಕ ಸ್ವಾತಂತ್ರ್ಯ ಕೊಡುವ ವಿಧೇಯಕವಲ್ಲ. ಸ್ವಾತಂತ್ರ ಕಸಿಯುವ ವಿಧೇಯಕವಾಗಿದೆ ಎಂದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ವಿವಾದಾತ್ಮಕ ಕಾಯ್ದೆಗಳನ್ನು ವಾಪಸ್ ಪಡೆಯುತ್ತೇವೆ. ಎಲ್ಲರಿಗೂ ಅವರ ಧರ್ಮ ಆಚರಣೆಯ ಹಕ್ಕಿದೆ. ಆದರೆ ಧಾರ್ಮಿಕ ಹಕ್ಕುಗಳ ಉಲ್ಲಂಘನೆ ಈ ಕಾಯ್ದೆಯಲ್ಲಿದೆ. ಆಮಿಷ, ಒತ್ತಾಯದ ಮೂಲಕ ಮತಾಂತರವಾಗುವುದನ್ನು ತಡೆಯಲು ಕಾಯ್ದೆ ತರಲಾಗುತ್ತಿದೆ ಎಂದಿದ್ದಾರೆ.
ಇದುವರೆಗೂ ಎಷ್ಟು ಬಲವಂತದ ಮತಾಂತರವಾಗಿದೆ, ಎಷ್ಟು ಪ್ರಕರಣಗಳು ದಾಖಲಾಗಿವೆ ಎಂಬುದರ ಬಗ್ಗೆ ಸರ್ಕಾರದ ಬಳಿ ದಾಖಲೆ ಇದೆಯೇ ಎಂದು ಪ್ರಶ್ನಿಸಿದರು. ಗೋಹತ್ಯೆ ನಿಷೇಧ ವಿಧೇಯಕಕ್ಕೆ ಹಣಕಾಸು ಇಲಾಖೆಯ ಒಪ್ಪಿಗೆ ದೊರೆತಿಲ್ಲ ಎಂದು ಅವರು ತಿಳಿಸಿದರು.