ಅನುಭವ ಮಂಟಪ ನಿರ್ಮಾಣ ಯಡಿಯೂರಪ್ಪನವರ ರಾಜಕೀಯ ನಾಟಕ : ವಾಟಾಳ್ ಆಕ್ರೋಶ

ಬೆಂಗಳೂರು,ಜ.6- ಬೀದರ್‍ನ ಬಸವಕಲ್ಯಾಣದಲ್ಲಿ ದಿಢೀರನೇ ಅನುಭವ ಮಂಟಪ ನಿರ್ಮಾಣ ಮಾಡಲು ಹೊರಟಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕ್ರಮ ರಾಜಕೀಯ ನಾಟಕ ಎಂದು ಆರೋಪಿಸಿರುವ ಕನ್ನಡ ಒಕ್ಕೂಟ, ನಗರದ ಚಾಲುಕ್ಯವೃತ್ತದ ಬಳಿಯ ಬಸವೇಶ್ವರ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದೆ. ಕನ್ನಡ ಒಕ್ಕೂಟದ ಮುಖಂಡರಾದ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕನ್ನಡ ಸೇನೆ ಕೆ.ಆರ್.ಕುಮಾರ್, ಮಂಜುನಾಥ್ ಬೇವು, ಗಿರೀಶ್ ಗೌಡ, ಸೇರಿದಂತೆ ಮುಂತಾದವರು ಪ್ರತಿಭಟನೆ ನಡೆಸಿ, ರಾಜಕೀಯ ಕಾರಣಕ್ಕೆ ಮರಾಠ ಅಭಿವೃದ್ಧಿ ಪ್ರಾಧಿಕಾರ ನಿರ್ಮಾಣ ಮಾಡಿರುವ ಮುಖ್ಯಮಂತ್ರಿಗಳು, ಇಂದು ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಶಂಕುಸ್ಥಾಪನೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ ಅವರು, ಉಪಚುನಾವಣೆಗೋಸ್ಕರ ಮರಾಠ ಅಭಿವೃದ್ಧಿ ನಿಗಮ ಮಾಡಿ ನಾಡಿನ ಹಿತಾಸಕ್ತಿಯನ್ನು ಬಲಿಕೊಟ್ಟ ಯಡಿಯೂರಪ್ಪ, 900 ವರ್ಷಗಳ ಇತಿಹಾಸವಿರುವ ಅನುಭವ ಮಂಟಪ ನಿರ್ಮಾಣ ಮಾಡುವುದನ್ನು ಬಿಟ್ಟು ರಾಜಕೀಯ ಹಿತಾಸಕ್ತಿಗೋಸ್ಕರ ದಿಢೀರನೇ ¾ಯಡಿಯೂರಪ್ಪ ಅನುಭವ ಮಂಟಪ¾ ಮಾಡಲು ಹೊರಟಿದ್ದಾರೆ ಎಂದು ಲೇವಡಿ ಮಾಡಿದರು.

ಅಲ್ಲಮ ಪ್ರಭು, ಬಸವಣ್ಣ, ಅಕ್ಕಮಹಾದೇವಿ ಅವರು ನಿರ್ಮಿಸಿದ ಅನುಭವಮಂಟಪ ಸಂಸತ್ ಮತ್ತು ಶಾಸನ ಸಭೆಗಳಿಗೆ ಮಾದರಿಯಾಗಿದೆ. ಅಂಥ ಅನುಭವ ಮಂಟಪ ನಿರ್ಮಾಣ ಮಾಡಲು ತರಾತುರಿ ಏಕೆ? ಇತಿಹಾಸಕಾರರೊಂದಿಗೆ, ತಜ್ಞರೊಂದಿಗೆ ಚರ್ಚಿಸಬೇಕಿತ್ತು. ಯಾವುದನ್ನೂ ಮಾಡದೇ ಕೇವಲ ಉಪಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜಕೀಯ ಅನುಭವ ಮಂಟಪ ನಿರ್ಮಾಣ ಮಾಡಲು ಹೊರಟಿರುವುದು ಅತ್ಯಂತ ಖಂಡನೀಯ ಎಂದು ಹೇಳಿದರು.

ರಾಜಕೀಯ ಹಿತಾಸಕ್ತಿಗೆ ನಾಡನ್ನು ಬಲಿಕೊಡುತ್ತಿರುವ ಯಡಿಯೂರಪ್ಪ ಈಗ ಬಸವಣ್ಣನವರ ತತ್ವ ಆದರ್ಶಗಳನ್ನು ಮತ್ತು ಅನುಭವ ಮಂಟಪವನ್ನೇ ಬಲಿಕೊಡಲು ಮುಂದಾಗುತ್ತಿದ್ದಾರೆ. ಇವರು ನಿರ್ಮಾಣ ಮಾಡುತ್ತಿರುವ ಅನುಭವ ಮಂಟಪ ಬಸವಣ್ಣನವರ ಅನುಭವ ಮಂಟಪವಲ್ಲ. ಯಡಿಯೂರಪ್ಪನವರ ಅನುಭವ ಮಂಟಪ ಎಂದು ಟೀಕಿಸಿದರು.

ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ಹಿಂಪಡೆಯಬೇಕೆಂದು ನಾವು ಹೋರಾಟವನ್ನು ಮುಂದುವರೆಸಿದ್ದೇವೆ. ಜನವರಿ 9ರಿಂದ ರಾಜ್ಯಾದ್ಯಂತ ರೈಲ್ ಬಂದ್ ಚಳುವಳಿ ಹಮ್ಮಿಕೊಂಡಿದ್ದೇವೆ. ಈ ರಾಜಕೀಯ ಅನುಭವ ಮಂಟಪದ ವಿರುದ್ಧವೂ ಕೂಡ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಸಾ.ರಾ.ಗೋವಿಂದು ಮಾತನಾಡಿ, ರಾಜಕೀಯ ಹಿತಾಸಕ್ತಿಗೋಸ್ಕರ ಯಡಿಯೂರಪ್ಪನವರು ದಿಢೀರ್ ಕೈಗೊಳ್ಳುತ್ತಿರುವ ನಿರ್ಧಾರಗಳು ಖಂಡನೀಯ. ಬೆಳಗಾವಿ ಉಪಚುನಾವಣೆಗಳಿಗೋಸ್ಕರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದರು. ಈಗ ಬಸವ ಕಲ್ಯಾಣ ಚುನಾವಣೆಗಾಗಿ ರಾತ್ರೋರಾತ್ರಿ ಅನುಭವ ಮಂಟಪ ನಿರ್ಮಾಣಕ್ಕೆ ಶಂಕುಸ್ಥಾಪನೆಗೆ ಮುಂದಾಗಿದ್ದಾರೆ.

ಇದನ್ನು ಕನ್ನಡ ಒಕ್ಕೂಟ ತೀವ್ರವಾಗಿ ವಿರೋಧಿಸುತ್ತದೆ. ಇವರ ಈ ಕ್ರಮಗಳು ಜನಸಾಮಾನ್ಯರಿಗೆ ಅರ್ಥವಾಗುತ್ತವೆ. ಜನರೇನು ದಡ್ಡರಲ್ಲ. ಮುಂದಿನ ದಿನಗಳಲ್ಲಿ ಜನ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.