ಜಿಲ್ಲಾ ಮಟ್ಟದಲ್ಲಿ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಆಗ್ರಹ

ಬೆಂಗಳೂರು, ಮೇ 19- ಜಿಲ್ಲಾ ಮಟ್ಟದಲ್ಲೆ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯ ಮಾಪನವನ್ನು ಮಾಡಲು ಅವಕಾಶ ಕಲ್ಪಿಸಬೇಕೆಂದು ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.

ದ್ವಿತೀಯ ಪಿಯುಸಿ ಅರ್ಥಶಾಸ್ತ್ರ ವಿಷಯದ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕಾರ್ಯವನ್ನು ಮೇ 21ರಿಂದ ಆಯ್ದ ಕೆಲವು ಜಿಲ್ಲೆಗಳಲ್ಲಿ ಮೌಲ್ಯ ಮಾಪನ ಮಾಡಲು ತೀರ್ಮಾನಿಸಿರುವುದನ್ನು ಸ್ವಾಗತಿಸಿರುವುದಾಗಿ ಅವರು ಸಚಿವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಅದೇ ರೀತಿ ಮೌಲ್ಯ ಮಾಪನ ಕಾರ್ಯವನ್ನು ವಿಕೇಂದ್ರೀಕರಣಗೊಳಿಸಿ ಜಿಲ್ಲಾ ಮಟ್ಟದಲ್ಲಿ ಮೌಲ್ಯಮಾಪನಕ್ಕೆ ಅವಕಾಶ ಮಾಡಿಕೊಡಬೇಕೆಂದು ಕೋರಿದ್ದಾರೆ. ರೈಲು ಸಾರಿಗೆ ಪ್ರಾರಂಭವಾಗಿಲ್ಲ.

ಅಲ್ಲದೆ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಮೌಲ್ಯ ಮಾಪನ ಮಾಡುವ ಸಿಬ್ಬಂದಿ ನೆಲೆಸಿರುವ ಜಿಲ್ಲೆಗಳಲ್ಲೇ ಮೌಲ್ಯ ಮಾಪನ ಮಾಡಲು ಅವಕಾಶ ಮಾಡಿಕೊಡಬೇಕು ಎಂದಿದ್ದಾರೆ.

ಮೌಲ್ಯ ಮಾಪನ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿಗೂ ಆರೋಗ್ಯ ಸುರಕ್ಷತಾ ಕಿಟ್ ಸೌಲಭ್ಯ ಒದಗಿಸಬೇಕು. 50 ವರ್ಷ ತುಂಬಿದ ಅನಾರೋಗ್ಯ ಉಪನ್ಯಾಸಕರಿಗೆ ಮೌಲ್ಯಮಾಪನ ಕಾರ್ಯದಿಂದ ವಿನಾಯ್ತಿ ನೀಡಬೇಕು.

ಗರ್ಭಿಣಿಯರು ಹಾಗೂ 3 ವರ್ಷದ ಒಳಗಿನ ಮಕ್ಕಳಿರುವ ತಾಯಂದಿರಿಗೂ ಮೌಲ್ಯಮಾಪನ ಕಾರ್ಯದಿಂದ ವಿನಾಯ್ತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಉತ್ತರ ಪತ್ರಿಕೆಗಳ ಅಂಕಗಳನ್ನು ಕಂಪ್ಯೂಟರ್‍ನಲ್ಲಿ ದಾಖಲಿಸಲು ಉಪನ್ಯಾಸಕರ ಬದಲಾಗಿ ಬೇರೆ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಬೇಕೆಂದು ಪತ್ರದಲ್ಲಿ ಅವರು ಮನವಿ ಮಾಡಿದ್ದಾರೆ.

Sri Raghav

Admin