ನ್ಯಾಯಾಧೀಶರನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡುವುದು ಖಂಡನಾರ್ಹ :ರಂಗನಾಥ್
ಬೆಂಗಳೂರು, ಮೇ 14-ನ್ಯಾಯಾಲಯಗಳು ಮತ್ತು ನ್ಯಾಯಾಧೀಶರನ್ನು ಗುರಿಯಾಗಿಸಿಕೊಂಡು ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ಮತ್ತು ಮಾಜಿ ಸಚಿವ ಸಿ. ಟಿ. ರವಿ ಅವರು ನೀಡಿರುವ ಹೇಳಿಕೆಗಳು ಖಂಡನಾರ್ಹವಾಗಿವೆ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ. ಪಿ. ರಂಗನಾಥ್ ತಿಳಿಸಿದ್ದಾರೆ.
ಇಂತಹ ಹೇಳಿಕೆಗಳನ್ನು ನ್ಯಾಯಾಧೀಶರ ಆತ್ಮ ಸ್ಥೈರ್ಯವನ್ನು ಕೆಡಸುವ ಉದ್ದೇಶದಿಂದ ಹೇಳಿರುವುದು ಮೇಲ್ನೋಟಕ್ಕೆ ಕಾಣುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ರಾಜಕೀಯ ನಾಯಕರು ತಮ್ಮ ಮಾತಿನ ಮೇಲೆ ನಿಗಾ ಇಟ್ಟಿರಬೇಕು. ಇಂತಹ ಕೀಳು ಮಟ್ಟದ ಮಾತುಗಳು ಕೆಟ್ಟ ಪರಂಪರೆಯನ್ನು ಬೆಳೆಸುತ್ತವೆ ಎಂದಿದ್ದಾರೆ.
ಕೋವಿಡ್ ಎರಡನೇ ಅಲೆ ಇಡೀ ದೇಶದ ನಾಗರೀಕರನ್ನು ಕಂಗೆಡಿಸಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏನೇನು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿತ್ತೋ ಅವುಗಳನ್ನೆಲ್ಲ ಕೈಗೊಳ್ಳುವ ಬದಲು ಕಾಲವನ್ನು ವ್ಯರ್ಥಗೊಳಿಸಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಸಾರ್ವಜನಿಕ ವಲಯದ ಆರೋಗ್ಯ ಮತ್ತು ಸಾಂಕ್ರಾಮಿಕ ರೋಗದ ಸೋಂಕನ್ನು ತಡೆಯುವ ನಿಟ್ಟಿನಲ್ಲಿ ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳ ಮೇಲೆ ಹೊಣೆಗಾರಿಕೆಯಿದೆ ಎಂದು ಹೇಳಿದ್ದಾರೆ.
ತನ್ನ ಪಾಲಿನ ಶಾಸನಬದ್ದ ಕೆಲಸವನ್ನು ಅರಿಯದೆ ಮೈಮರೆತ ಕಾರ್ಯಾಂಗಕ್ಕೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನ ಮಧ್ಯಂತರ ಆದೇಶಗಳು ಮುಜುಗರ ತಂದಿರುವುದು ಸ್ಪಷ್ಟವಾಗಿ ತಿಳಿದಿರುವ ಸಂಗತಿ. ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಮೀಸಲಾಗಿರುವ ಉನ್ನತ ನ್ಯಾಯಾಲಯಗಳು ಸಂವಿಧಾನದ ಅನುಚ್ಛೇದ 21 ರಲ್ಲಿ ಮಾನ್ಯ ಮಾಡಿದ ನಾಗರಿಕರ ಬದುಕುವ ಹಕ್ಕನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಸರಿಯಾದ ಹೆಜ್ಜೆಗಳನ್ನು ಇರಿಸಿವೆ.
ಇದನ್ನು ಸರಿಯಾಗಿ ಗ್ರಹಿಸದೆ ನ್ಯಾಯಾಲಯಗಳು ಮತ್ತು ನ್ಯಾಯಾಧೀಶರನ್ನು ಗುರಿಯಾಗಿಸಿಕೊಂಡು ಸದಾನಂದ ಗೌಡ ಮತ್ತು ಸಿ. ಟಿ. ರವಿ ಅವರು ನೀಡಿರುವ ಹೇಳಿಕೆಗಳನ್ನು ಖಂಡಿಸುವುದಾಗಿ ಅವರು ಹೇಳಿದ್ದಾರೆ.