ಕೋವಿಡ್ ನಿಂದ ಮೃತಪಟ್ಟ ವಕೀಲರಿಗೆ 30ಲಕ್ಷ ರೂ.ಪರಿಹಾರಕ್ಕೆ ಆಗ್ರಹ

ಬೆಂಗಳೂರು, ಮೇ 16-ವಕೀಲರನ್ನು ಮುಂಚೂಣಿ ವಾರಿಯರ್ಸ್ ಎಂದು ಪರಿಗಣಿಸಿ, ಮೃತಪಟ್ಟ ವಕೀಲರ ಕುಟುಂಬದವರಿಗೆ 30 ಲಕ್ಷ ರೂ.ಪರಿಹಾರ ನೀಡಬೇಕು ಎಂದು ಬೆಂಗಳೂರು ವಕೀಲರ ಸಂಘ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಅವರು, ಕೋವಿಡ್ ಎರಡನೇ ಅಲೆಯಿಂದ ವಕೀಲ ಸಮುದಾಯ ತೀವ್ರ ಸಂಕಷ್ಟ ಎದುರಿಸುತ್ತಿದೆ. ಹಲವು ವಕೀಲರು ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಕೆಲವರು ಮೃತ ಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ಈಗಾಗಲೇ ಕೋವಿಡ್ ನಿಂದ 58 ಮಂದಿ ವಕೀಲರು ಬೆಂಗಳೂರಿನಲ್ಲಿ ಮೃತಪಟ್ಟಿರುವ ಮಾಹಿತಿ ಇದೆ. ಯುವ ವಕೀಲರೇ ಹೆಚ್ಚು ಸೋಂಕಿಗೆ ಒಳಗಾಗುತ್ತಿರುವುದು ತುಂಬಾ ನೋವಿನ ವಿಚಾರವಾಗಿದೆ. ವಕೀಲ ವೃತ್ತಿ ನೋಬೆಲ್ ವೃತ್ತಿಯಾಗಿರುವುದು ಗೊತ್ತಿರುವ ವಿಚಾರ. ವಕೀಲ ವೃತ್ತಿ ನಿರತರ ಸಂಕಷ್ಟಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಬೆಂಗಳೂರು ವಕೀಲರ ಸಂಘವು ದೇಶದಲ್ಲೇ ದೊಡ್ಡ ಸಂಘವಾಗಿದ್ದು, ಹೆಚ್ಚು ಸದಸ್ಯರನ್ನು ಹೊಂದಿದೆ. ಬಿಡುವಿಲ್ಲದೆ ವಕೀಲರು ತಮ್ಮ ವೃತ್ತಿಯ ಕಾರ್ಯದೊತ್ತಡದಲ್ಲಿರುತ್ತಾರೆ. ಹೀಗಾಗಿ ಕೋವಿಡ್ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯುವುದು ಕಷ್ಟವಾಗಲಿದೆ. ಈಗಾಗಲೇ ಅವಕಾಶ ಮಾಡಿಕೊಟ್ಟಂತೆ ಮತ್ತೊಮ್ಮೆ ನಮ್ಮ ಸಂಘದಲ್ಲಿ ವಕೀಲರಿಗೆ ಲಸಿಕೆ ಪಡೆಯಲು ಅವಕಾಶ ಮಾಡಿಕೊಡಬೇಕು ಎಂದು ಅವರು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ‌.

ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ಪಡೆಯಲು ಹಾಗೂ ಲಸಿಕೆ ಪಡೆಯದವರಿಗೆ ಮೊದಲ ಡೋಸ್ ಪಡೆಯಲು ಅನುಕೂಲವಾಗುವಂತೆ ಸಂಘದಲ್ಲಿ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.