ಪಿಎಸ್‍ಐ ಪರೀಕ್ಷಾ ಅಕ್ರಮ : ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ವಕೀಲರ ಧರಣಿ

ಬೆಂಗಳೂರು, ಮೇ 17-ಪಿಎಸ್‍ಐ ಪರೀಕ್ಷಾ ಅಕ್ರಮದ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಭ್ರಷ್ಟಾಚಾರದ ವಿರುದ್ಧ ನಾವು ಸಂಘಟನೆ ಸಹಯೋಗದಲ್ಲಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ಸಿಐಡಿ ಕಚೇರಿ ಎದುರು ಇಂದು ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಿಎಸ್‍ಐ ಪರೀಕ್ಷಾ ಅಕ್ರಮ ದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯುತ್ತಿಲ್ಲ. ಪ್ರಕರಣದಲ್ಲಿ ದೊಡ್ಡದೊಡ್ಡವರ ಹೆಸರುಗಳು ಥಳುಕು ಹಾಕಿಕೊಂಡಿವೆ. ಅನೇಕ ರಾಜಕೀಯ ನಾಯಕರು ಅಧಿಕಾರಿಗಳನ್ನು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿಲ್ಲ. ತನಿಖಾಧಿಕಾರಿಗಳ ಮೇಲೆ ಒತ್ತಡ ಮತ್ತು ಪ್ರಭಾವವಿರುವುದರಿಂದ ನಿಷ್ಪಕ್ಷಪಾತ ತನಿಖೆ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.

ನೇಮಕಾತಿ ವಿಭಾಗದ ಅಧಿಕಾರಿ ಶಾಂತಕುಮಾರ್ ಅವರ ವಿಚಾರಣೆ ಸಂದರ್ಭದಲ್ಲಿ ಅನೇಕ ಪ್ರಭಾವಿಗಳನ್ನು ಬಂಧಿಸದಂತೆ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ನೇಮಕಾತಿ ವಿಭಾಗದ ಎಡಿಜಿಪಿ ಅವರನ್ನು ಕೇವಲ ವರ್ಗಾವಣೆ ಮಾಡಲಾಗಿದೆ. ಆದರೆ, ಈವರೆಗೆ ವಿಚಾರಣೆ ಮಾಡಿಲ್ಲ ಎಂದ ಅವರು, ಈ ಪ್ರಕರಣದಲ್ಲಿ ಹಲವು ಪ್ರಭಾವಿ ನಾಯಕರ ಕೈವಾಡವಿದೆ. ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ಹೀಗಾಗಿ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಈ ಮೂಲಕ ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.