ಬೆಂಗಳೂರು,ಫೆ.15- ರಾಜ್ಯ ಸರ್ಕಾರ ತಿದ್ದುಪಡಿ ಮಾಡಿ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರಗಳ ಅಧಿನಿಯಮವನ್ನು ಹಿಂಪಡೆಯುವುದಿಲ್ಲ. ನಷ್ಟದಲ್ಲಿರುವ ಎಪಿಎಂಸಿಗಳು ವಿಲೀನಕ್ಕೆ ಪ್ರಸ್ತಾವನೆ ಬಂದರೆ ಅದನ್ನು ಪರಿಶೀಲಿಸುವುದಾಗಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಭರವಸೆ ನೀಡಿದರು.
ವಿಧಾನಪರಿಷತ್‍ನ ಪ್ರಶ್ನೋತ್ತರ ಅವಯಲ್ಲಿ ಸದಸ್ಯ ಹರೀಶ್‍ಕುಮಾರ್ ಅವರು , ಎಪಿಎಂಸಿಗಳಲ್ಲಿ ಒಂದು ರೂ. 40 ಪೈಸೆ ಶುಲ್ಕ ಸಂಗ್ರಹಿಸಲಾಗುತ್ತಿದ್ದು, ಆಗ ಪುತ್ತೂರು ಎಂಪಿಸಿಗೆ 7 ಕೋಟಿ ಆದಾಯ ಬರುತ್ತಿತ್ತು. ಶುಲ್ಕವನ್ನು 60 ಪೈಸೆಗೆ ಇಳಿಸಿದ ಮೇಲೆ ನಾಲ್ಕೈದು ಕೋಟಿ ರೂ.ನಷ್ಟು ತೆರಿಗೆ ಸಂಗ್ರಹವಾಗಿದೆ. ರೈತ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎಂಬ ನಿಯಮ ಜಾರಿಯಲ್ಲಿರುವುದರಿಂದ ಈ ವರ್ಷ ಎರಡು ಕೋಟಿಯಷ್ಟು ಆದಾಯ ಸಂಗ್ರಹವಾಗುವ ನಿರೀಕ್ಷೆಯಿಲ್ಲ. ಎಪಿಎಂಸಿ ನಷ್ಟದಲ್ಲಿದೆ, ಸಾವಿರಾರು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಎಪಿಎಂಸಿ ಕಾಯ್ದೆಯನ್ನ ಹಿಂಪಡೆಯಿರಿ ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸೋಮಶೇಖರ್, ರೈತ ಅನುಕೂಲಕ್ಕಾಗಿ ಎಪಿಎಂಸಿ ಕಾಯ್ದೆ ತಿದ್ದುಪಡಿ ತರಲಾಗಿದೆ. ಈ ಮೊದಲು ಕೃಷಿ ಉತ್ಪನ್ನಗಳನ್ನು ಎಪಿಎಂಸಿಯಲ್ಲೇ ಮಾರಾಟ ಮಾಡಬೇಕಾಗಿತ್ತು. ಹೊರಗಡೆ ಮಾರಾಟ ಮಾಡಿದರೆ 5-10 ಸಾವಿರ ದಂಡ ವಿಸಲಾಗುತ್ತಿತ್ತು. ಅದನ್ನು ರದ್ದು ಮಾಡಿದ್ದೇವೆ.
ಇದರಿಂದ ರೈತರಿಗೆ ಅನುಕೂಲವಾಗಲಿದೆ. ವರ್ಷಕ್ಕೆ ಎಲ್ಲ ಎಪಿಎಂಸಿಗಳಿಂದ 625 ಕೋಟಿ ರೂ.ನಷ್ಟು ಶುಲ್ಕ ಸಂಗ್ರಹವಾಗುತ್ತಿತ್ತು. ಸೆಸ್ ಕಡಿಮೆಯಾದ ಮೇಲೆ 170 ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆಯಿದೆ. ಯಾವ ಎಪಿಎಂಸಿಗಳು ನಷ್ಟದಲ್ಲಿಲ್ಲ. ಆದಾಯ ಪ್ರಮಾಣ ಕಡಿಮೆಯಾಗಿದೆ. ಯಾರಾದರೂ ಯಾವುದಾದರು ಎಪಿಎಂಸಿಯಲ್ಲಿ ವೇತನ ಕೊಡಲು ಆಗದ ಕಷ್ಟದ ಪರಿಸ್ಥಿತಿ ಇದ್ದರೆ ಸರ್ಕಾರವೇ ಹಣಕಾಸಿನ ನೆರವು ನೀಡಲಿದೆ.
ಎಪಿಎಂಸಿಗಳನು ವೀಲಿನ ಮಾಡುವ ಪ್ರಸ್ತಾವ ಬಂದರೆ ಪರಿಶೀಲಿಸುವುದಾಗಿ ಹೇಳಿದರು. ಆದರೆ ವಿಲೀನ ಪ್ರಕ್ರಿಯೆಗೆ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಇದೇ ವೇಳೆ ವಿರೋಧ ಪಕ್ಷದ ನಾಯಕ ಬಿ.ಕೆ.ಹರೀಶ್‍ಪ್ರಸಾದ್, ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆಯನ್ನು ಹಿಂಪಡೆದಿದೆ. ಅದೇ ರೀತಿ ರಾಜ್ಯದಲ್ಲೂ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
