ಮತಾಂತರ ನಿಷೇಧ ಯಾವುದೇ ಧರ್ಮದ ವಿರುದ್ಧ ಅಲ್ಲ : ಗೃಹ ಸಚಿವ ಜ್ಞಾನೇಂದ್ರ

ಬೆಂಗಳೂರು, ಮೇ 17- ಯಾವುದೇ ಧರ್ಮದ ವಿರುದ್ಧ ಮತಾಂತರ ನಿಷೇಧ ಕಾಯ್ದೆ ರೂಪಿತವಾಗಿಲ್ಲ. ಆದರೆ, ಯಾವುದೇ ರೀತಿಯ ಆಮಿಷ ಅಥವಾ ಬಲವಂತದ ಮತಾಂತರಕ್ಕೆ ಅವಕಾಶವಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲಾದ ಮತಾಂತರ ನಿಷೇಧ (ತಿದ್ದುಪಡಿ) ವಿಧೇಯಕಕ್ಕೆ ವಿಧಾನ ಸಭೆಯಿಂದ ಅಂಗೀಕಾರ ಪಡೆಯಲಾಗಿದೆ. ಮೇಲ್ಮನೆಯಲ್ಲಿ ಮಂಡಿಸಲಾಗಿರುವ ಮಸೂದೆಗೆ ಮುಂದಿನ ಅಧಿವೇಶನದಲ್ಲಿ ಒಪ್ಪಿಗೆ ಪಡೆಯಲಾಗುವುದು ಎಂದರು.

ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಗೆ ರಾಜ್ಯಪಾಲರ ಸಮ್ಮತಿ ನಿರೀಕ್ಷಿಸಿದ್ದೇವೆ ಎಂದು ಸುಗ್ರೀವಾಜ್ಞೆಯನ್ನು ಬಲವಾಗಿ ಸಮರ್ಥಿಸಿದರು. ಸಮಾಜದಲ್ಲಿ ಶಾಂತಿ-ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಕ್ರೈಸ್ತ ಧಾರ್ಮಿಕ ಮುಖಂಡರು, ರಾಜ್ಯಪಾಲರನ್ನು ಭೇಟಿಯಾಗಿ ಮತಾಂತರ ಮಸೂದೆ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಸಂವಿಧಾನದತ್ತವಾಗಿ ಇರುವ ಧಾರ್ಮಿಕ ಹಕ್ಕುಗಳನ್ನು ಮೊಟಕುಗೊಳಿಸುವ ಯಾವುದೇ ಪ್ರಸ್ತಾವವೂ ತಿದ್ದುಪಡಿ ಮಸೂದೆಯಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು.

ತಿದ್ದುಪಡಿ ಮಸೂದೆ ಬಗ್ಗೆ, ಸದನದಲ್ಲಿ ವಿವರವಾಗಿ ಚರ್ಚಿಸಲಾಗಿದೆ. ಶಾಸಕರೊಬ್ಬರು ಮತಾಂತರ ಹಾವಳಿ ಸೃಷ್ಟಿಸಿದ ಕುಟುಂಬಗಳ ನಡುವಿನ ಘರ್ಷಣೆಗಳ ಕುರಿತು ಪ್ರಸ್ತಾಪಿಸಿದ್ದನ್ನೂ ನೆನಪಿಸಿದ ಸಚಿವರು, ಸುಗ್ರೀವಾಜ್ಞೆಗೆ ಸಮ್ಮತಿ ಸಿಕ್ಕಿದ ನಂತರ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುವುದು ಎಂದರು.

ಈ ಹಿಂದೆ ಕಾಂಗ್ರೆಸ್ ಸರ್ಕಾರ ಮತಾಂತರ ನಿಷೇಧ ಕಾಯ್ದೆ ತಂದಿದ್ದನ್ನು ನೆನಪಿಸಿದ ಸಚಿವರು, ನಮ್ಮ ಸರ್ಕಾರ ಆ ವಿಧೇಯಕವನ್ನು ಮತ್ತಷ್ಟು ಬಲಗೊಳಿಸಿದ್ದಲ್ಲದೆ ಕಟ್ಟುನಿಟ್ಟಾಗಿ ಜಾರಿಗೆ ತರಲು ಬದ್ಧವಾಗಿದೆ ಎಂದು ಹೇಳಿದರು.