ನವದೆಹಲಿ,ನ.11- ದೆಹಲಿಯ ಸ್ಫೋಟ ಪ್ರಕರಣಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಘಟಕ ಜೈಶ್-ಎ- ಮೊಹಮದ್ (ಜೆಇಎಂ) ಮತ್ತು ಅನ್ಸರ್ ಘಜ್ವತ್-ಉಲ್-ಹಿಂದ್‌ನ ಸಂಭಾವ್ಯ ಪಾತ್ರ ಸೇರಿದಂತೆ ಗುಪ್ತಚರ ಸಂಸ್ಥೆಗಳು ಭಾಗಿಯಾಗಿರಬಹುದೆಂಬ ಎಲ್ಲಾ ಆಯಾಮಗಳಲ್ಲೂ ಪರಿಶೀಲನೆ ನಡೆಸುತ್ತಿವೆ.
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಿಂದ ದೆಹಲಿಯ ಜನದಟ್ಟಣೆಯ ಸ್ಥಳಗಳಲ್ಲಿ ಸಂಭಾವ್ಯ ಭಯೋತ್ಪಾದಕ ದಾಳಿಯ ಬಗ್ಗೆ ರಾಜ್ಯ ಕಾನೂನು ಜಾರಿ ಸಂಸ್ಥೆಗಳಿಗೆ ಎಚ್ಚರಿಕೆ ನೀಡಲಾಗಿತ್ತು ಎಂದು ತನಿಖಾ ಸಂಸ್ಥೆಗಳು ತಿಳಿಸಿವೆ.ಸ್ಫೋಟದ ತೀವ್ರತೆ ತುಂಬಾ ಹೆಚ್ಚಾಗಿತ್ತು. ಕಾರು ಮತ್ತು ಆಟೋ ಭಾಗಗಳು ರಸ್ತೆಯುದ್ದಕ್ಕೂ ಹರಡಿಕೊಂಡಿರುವುದು ಕಂಡುಬಂದಿದೆ. ಕಿಟಕಿ ಗಾಜುಗಳು ಸುಮಾರು 300 ಮೀಟರ್ ದೂರದಲ್ಲಿ ಛಿದ್ರಗೊಂಡಿವೆ.
24 ಜನರು ಗಾಯಗೊಂಡ ಈ ಸ್ಫೋಟವು ಆರಂಭದಲ್ಲಿ ಗುಪ್ತಚರ ಮತ್ತು ಭದ್ರತಾ ಸಂಸ್ಥೆಗಳನ್ನು ಬೆಚ್ಚಿಬೀಳಿಸಿದೆ. ಶ್ರಾಪ್ನಲ್ ಮತ್ತು ಇತರ ಬಾಂಬ್‌ಗಳಂತಹ ಸ್ಪಷ್ಟ ವಸ್ತು ಪುರಾವೆಗಳು ಸ್ಥಳದಿಂದ ಇಲ್ಲಿಯವರೆಗೆ ಪತ್ತೆಯಾಗಿಲ್ಲ. ಆದಾಗ್ಯೂ, ಪರಿಣಾಮದ ವ್ಯಾಪ್ತಿಯು ಸಂಭವನೀಯ ಭಯೋತ್ಪಾದಕ ಕೋನವನ್ನು ಸೂಚಿಸುತ್ತದೆ.
ಹುಂಡೈ ಐ20 ಕಾರನ್ನು ಸ್ಫೋಟಕ್ಕೂ ಮುನ್ನ ಮಸೀದಿಯೊಂದರ ಬಳಿ ಮೂರು ಗಂಟೆಗಳ ಕಾಲ ಪಾರ್ಕಿಂಗ್ ಮಾಡಲಾಗಿತ್ತು. ಕಾರು ಸುನೇಹ್ರಿ ಮಸೀದಿ ಪಾರ್ಕಿಂಗ್ ಸ್ಥಳಕ್ಕೆ ಮಧ್ಯಾಹ್ನ 3.19ಕ್ಕೆ ಪ್ರವೇಶಿಸಿ ಸಂಜೆ 6:48ಕ್ಕೆ ನಿರ್ಗಮಿಸಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಪತ್ತೆಯಾಗಿದೆ. ಪಾರ್ಕಿಂಗ್ ಸ್ಥಳದಿಂದ ನಿರ್ಗಮಿಸಿದ ಕೆಲವೇ ನಿಮಿಷಗಳ ನಂತರ ಕೆಂಪು ಕೋಟೆಯ ಬಳಿ ಸಂಜೆ 6.52-7.00 ಗಂಟೆ ನಡುವೆ ಸ್ಫೋಟಗೊಂಡಿದೆ. ತನಿಖಾಧಿಕಾರಿಗಳು ಈಗ ದರಿಯಾಗಂಜ್ ಕಡೆಗೆ ಹೋಗುವ ಮಾರ್ಗವನ್ನು ಪತ್ತೆಹಚ್ಚುತ್ತಿದ್ದಾರೆ. ಕಾರು ಎಲ್ಲಿಂದ ಆಗಮಿಸಿದೆ ಎನ್ನುವುದರ ಜಾಡು ಹಿಡಿಯಲು 100ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪರಿಶೀಲಿಸುತ್ತಿದ್ದಾರೆ.
