ನವದೆಹಲಿ, ಜು.19- ಮಿಲಿಟರಿ ಸೇವೆ ಮತ್ತು ಅದಕ್ಕೆ ಸಂಬಂಧಿಸಿದ ಕಾರಣಗಳಿಂದ ಶೇ.20ಕ್ಕಿಂತ ಹೆಚ್ಚಿನ ಅಂಗವೈಕಲ್ಯಕ್ಕೆ ತುತ್ತಾಗಿದ್ದರೆ ಮಾತ್ರ ಸೇನಾ ಸಿಬ್ಬಂದಿ ವಿಕಲಚೇತನ ಪಿಂಚಣಿಗೆ ಅರ್ಹರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸೇನಾ ಸಿಬ್ಬಂದಿಗೆ ವಿಕಲಚೇತನ ಪಿಂಚಣಿ ಮಂಜೂರು ಮಾಡಿದ ಸಶಸ್ತ್ರ ಪಡೆಗಳ ನ್ಯಾಯಮಂಡಳಿಯ ಆದೇಶವನ್ನು ಪ್ರಶ್ನಿಸಿ ಕೇಂದ್ರಸರ್ಕಾರ ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಮತ್ತು ಎಂಎಂ ಸುಂದ್ರೇಶ್ ಅವರ ಪೀಠ ವಿಚಾರಣೆ ನಡೆಸಿದೆ.
ಸಶಸ್ತ್ರ ಪಡೆಗಳ ಸದಸ್ಯರ ಅಂಗವೈಕಲ್ಯಕ್ಕೆ ಮಿಲಿಟರಿ ಸೇವೆ ಮತ್ತು ಸಮಂಜಸ ಸಂಬಂಧವಿದ್ದಾಗ ಮಾತ್ರ ಪಿಂಚಣಿ ನೀಡಲು ಸಾಧ್ಯ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಕೇಂದ್ರ ಸರ್ಕಾರದ ಪರವಾಗಿ ಸಲ್ಲಿಸಿದ್ದ ಪ್ರಮಾಣ ಪತ್ರವನ್ನು ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ.
ಪ್ರಸ್ತುತ ಪಕರಣದಲ್ಲಿ ಯೋಧರು 1965ರ ಜೂನ್ 4 ಸೇನೆಗೆ ಸೇರಿದ್ದರು. 10 ವರ್ಷ ಮತ್ತು 88 ದಿನಗಳವರೆಗೆ ಸೇವೆ ಸಲ್ಲಿಸಿದ್ದರು. 1975ರ ಆಗಸ್ಟ್ 30ರಂದು ಅವರನ್ನು ಕಾಯ್ದಿರಿಸಿದ ಸಂಸ್ಥೆಗೆ ವರ್ಗಾಯಿಸಲಾಯಿತು. ಈ ನಡುವೆ ಅವರು ಮೀಸಲು ಘಟಕಕ್ಕೆ ವರ್ಗಾವಣೆ ಮಾಡಲಾಯಿತು.
1976ರ ಜನವರಿ 7ರಂದು ಅವರು ಸ್ವಯಂ ಪ್ರೇರಣೆಯಿಂದ ರಕ್ಷಣಾ ಪಡೆಯ ಪೊಲೀಸ್ ಸೇವೆಗೆ ಸೇರಿಕೊಂಡರು. 1999ರ ನವೆಂಬರ್ 6ರಂದು ವಾರ್ಷಿಕ ರಜೆ ಪಡೆದು ಕೇಂದ್ರ ಸ್ಥಾನ ಬಿಟ್ಟು ಹೊರಟರು. ಅಲ್ಲಿಂದ ಎರಡು ದಿನಗಳಲ್ಲಿ ರಸ್ತೆ ದಾಟುವಾಗ ಸ್ಕೂಟರ್ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದರು. ವೈದ್ಯಕೀಯ ಮಂಡಳಿ ವರದಿ ಪ್ರಕಾರ ಅವರು ಶೇ.80ರಷ್ಟು ಅಂಗವೈಕಲ್ಯಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು 2000ರ ಸೆಪ್ಟೆಂಬರ್ 28ರಂದು ಸೇವೆಯಿಂದ ಅಮಾನ್ಯಗೊಳಿಸಲಾಯಿತು. ನಂತರ ಅವರು ಸಶಸ್ತ್ರ ಪಡೆಗಳ ನ್ಯಾಯಾಕರಣಕ್ಕೆ ಅಂಗವಿಕಲ ಪಿಂಚಣಿ ಮಂಜೂರು ಮನವಿ ಸಲ್ಲಿಸಿದರು.
ಅಧಿಕೃತ ರಜೆಯ ಅವಧಿಯಲ್ಲಿ ಒಬ್ಬ ವ್ಯಕ್ತಿಯು ಗಾಯಕ್ಕೊಳಗಾದರೆ ಅದನ್ನು ಮಿಲಿಟರಿ ಸೇವೆಗೆ ಹೊಂದಿಕೆಯಾಗಿದೆ ಎಂದು ಭಾವಿಸಲಾಗುತ್ತದೆ. ಅಂಗವೈಕಲ್ಯವನ್ನು ಮಿಲಿಟರಿ ಸೇವೆಯ ಕಾರಣ ಎಂದು ಪರಿಗಣಿಸಿ ಮಿಲಿಟರಿ ನ್ಯಾಯಮಂಡಳಿ ಪಿಂಚಣಿ ಮಂಜೂರು ಮಾಡಿತ್ತು.
ಕೇಂದ್ರ ಸರ್ಕಾರ ಮಂಡಳಿ ನಿರ್ಣಯವನ್ನು ಸುಪ್ರಿಂಕೋರ್ಟ್‍ನಲ್ಲಿ ಪ್ರಶ್ನಿಸಿತ್ತು. ಅಂಗವೈಕಲ್ಯವು ಮಿಲಿಟರಿ ಸೇವೆಯಿಂದ ಉಂಟಾಗಿದ್ದರೆ ಮತ್ತು ಉಲ್ಬಣಗೊಂಡಿದ್ದರೆ ಮಾತ್ರ ಪಿಂಚಣಿ ನೀಡುವುದಾಗಿ ಕೇಂದ್ರ ಹೇಳಿತ್ತು. ಅದನ್ನು ಸುಪ್ರೀಂಕೋರ್ಟ್ ಬೆಂಬಲಿಸಿ ಪಿಂಚಣಿ ನೀಡುವಂತೆ ನೀಡಿದ್ದ ನ್ಯಾಯ ಮಂಡಳಿಯ ಆದೇಶವನ್ನು ರದ್ದುಗೊಳಿಸಿದೆ.