ಖತರ್ನಾಕ್ ಮೆಕ್ಯಾನಿಕ್, ಸಹಚರನ ಬಂಧನ : 20 ಲಕ್ಷ ಮೌಲ್ಯದ ವಾಹನಗಳ ವಶ

Social Share

ಬೆಂಗಳೂರು,ಸೆ.3-ವಾಹನ ರಿಪೇರಿ ಮಾಡೋ ಕೆಲಸ ಬಿಟ್ಟು ದ್ವಿಚಕ್ರವಾಹನಗಳನ್ನು ಕಳುವು ಮಾಡವುದನ್ನೇ ಕಾಯಕ ಮಾಡಿಕೊಂಡಿದ್ದ ಖತರ್ನಾಕ್ ಮೆಕ್ಯಾನಿಕ್ ಹಾಗೂ ಆತನ ಸಹಚರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಜಯನಗರ ಪೊಲೀಸರು ಆರೋಪಿಗಳಿಂದ 20 ಲಕ್ಷ ಮೌಲ್ಯದ 20 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಶಿವಾಜಿನಗರದ ಶಿವಾಜಿ ರಸ್ತೆಯ ಮೆಕ್ಯಾನಿಕ್ ಅಪ್ರೋಜ್ ಪಾಷಾ(37) ಹಾಗೂ ಕೋಲಾರ ಜಿಲ್ಲೆ ಬೇತಮಂಗಲದ ನಿವಾಸಿ ಅಶ್ವಕ್ ಹುಸೇನ್(26) ಬಂಧಿತ ಆರೋಪಿಗಳು. ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ 25 ರಂದು ರಾಯಲ್ ಎನ್‍ಫೀಲ್ಡ್ ವಾಹನ ಕಳುವಾಗಿದೆ ಎಂದು ದೂರು ದಾಖಲಾಗಿತ್ತು.

ಈ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಜಯನಗರ ಪೊಲೀಸರು ಮೆಕ್ಯಾನಿಕ್ ಅಪ್ರೋಜ್ ಹಾಗೂ ಆತನ ಸಹಚರ ಅಶ್ವಕ್‍ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಅವರ ದ್ವಿಚಕ್ರವಾಹನ ಕಳುವು ಪ್ರಕರಣಗಳ ಸರಮಾಲೆ ಬಹಿರಂಗಗೊಂಡಿದೆ.

ಮೆಕ್ಯಾನಿಕ್ ಆಗಿದ್ದರೂ ಅಪ್ರೋಜ್ ತನ್ನ ಸಹಚರನೊಂದಿಗೆ ದ್ವಿಚಕ್ರ ವಾಹನಗಳನ್ನು ಕಳುವು ಮಾಡಿ ಕದ್ದ ವಾಹನಗಳ ಬಿಡಿಭಾಗಗಳನ್ನು ಬೇರ್ಪಡಿಸಿ ಶಿವಾಜಿನಗರದಲ್ಲಿ ಮಾರಾಟ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ. ಆರೋಪಿಗಳು ನೀಡಿದ ಮಾಹಿತಿ ಮೇರೆಗೆ 20 ಲಕ್ಷ ಮೌಲ್ಯದ ವಿವಿಧ ಕಂಪೆನಿಗಳ 20 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಡಿಸಿಪಿ ಕೃಷ್ಣಕಾಂತ್ ಹಾಗೂ ಎಸಿಪಿ ಕೆ.ವಿ.ಶ್ರೀನಿವಾಸ್ ಮಾರ್ಗದರ್ಶನದಲ್ಲಿ ಜಯನಗರ ಇನ್ಸ್‍ಪೆಕ್ಟರ್ ಮಂಜುನಾಥ್ ಹಾಗೂ ಸಿಬ್ಬಂದಿ ವರ್ಗದವರು ವಾಹನಗಳ್ಳ ಮೆಕ್ಯಾನಿಕ್ ಹಾಗೂ ಆತನ ಸಹಚರನನ್ನು ಬಂಸುವಲ್ಲಿ ಯಶಸ್ವಿಯಾಗಿದ್ದಾರೆ.

ರಸ್ತೆ ಬದಿ ನಿಲ್ಲಿಸುವ ದ್ವಿಚಕ್ರ ವಾಹನಗಳನ್ನು ಕ್ಷಣ ಮಾತ್ರದಲ್ಲಿ ಕಳುವು ಮಾಡಿ ಯಾವ ಸುಳಿವು ಸಿಗದಂತೆ ಬಿಡಿ ಭಾಗಗಳನ್ನು ಶಿವಾಜಿನಗರದಲ್ಲಿ ಮಾರಾಟ ಮಾಡಿ ನಗರದ ವಾಹನ ಸವಾರರಿಗೆ ಕಂಟಕರಾಗಿ ಪರಿಣಮಿಸಿದ್ದ ಆರೋಪಿಗಳನ್ನು ಬಂಧಿಸಿರುವ ಜಯನಗರ ಪೊಲೀಸರ ಕಾರ್ಯಕ್ಕೆ ಮೇಲಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Articles You Might Like

Share This Article