ಬೆಂಗಳೂರು,ಜು.19- ಪತ್ನಿಯನ್ನು ಮನೆಗೆ ಕಳುಹಿಸಿಕೊಡಲಿಲ್ಲ ಎಂಬ ಕಾರಣಕ್ಕೆ ಅತ್ತೆಯೊಂದಿಗೆ ಜಗಳವಾಡಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಅಳಿಯನನ್ನು ಎಚ್‍ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೊಸಕೋಟೆ ನಿವಾಸಿ ನಾಗರಾಜ್ (35) ಬಂಧಿತ ಅಳಿಯ. ಮಾರತಹಳ್ಳಿಯ ಮಂಜುನಾಥನಗರದ ನಿವಾಸಿ ಸೌಭಾಗ್ಯ(40) ಕೊಲೆಯಾದ ಅತ್ತೆ.
ಚಾಲಕ ವೃತ್ತಿ ಮಾಡುವ ನಾಗರಾಜನಿಗೆ ಆರು ವರ್ಷದ ಹಿಂದೆ ಸೌಭಾಗ್ಯ ಅವರ ಮಗಳು ಭವ್ಯಶ್ರೀ ಜೊತೆ ವಿವಾಹ ಮಾಡಿಕೊಡಲಾಗಿದ್ದು, ದಂಪತಿಗೆ ಒಂದು ಮಗುವಿದೆ. ಕುಡಿತದ ಚಟ ಹೊಂದಿದ್ದ ನಾಗರಾಜ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯತ್ತಿತ್ತು. ಇದರಿಂದ ಕೋಪಗೊಂಡು ಭವ್ಯಶ್ರೀ ಮೂರು ವರ್ಷದಿಂದ ತವರು ಮನೆಯಲ್ಲೇ ಉಳಿದುಕೊಂಡಿದ್ದಾಳೆ.
ಮಾರತಹಳ್ಳಿಯ ಮಂಜುನಾಥನಗರದ ಆಟೋ ನಿಲ್ದಾಣ ಪಕ್ಕದ ತರಕಾರಿ ಮಾರುಕಟ್ಟೆಯಲ್ಲಿ ಅತ್ತೆ ಸೌಭಾಗ್ಯ ತರಕಾರಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದರು. ಕಳೆದ 12ರಂದು ಅತ್ತೆ ಮನೆಗೆ ಬಂದ ನಾಗರಾಜ ಪತ್ನಿಯನ್ನು ತನ್ನ ಜೊತೆ ಕಳುಹಿಸಿಕೊಡುವಂತೆ ಕೇಳಿದ್ದಾನೆ.
ಆ ವಿಚಾರವಾಗಿ ಅತ್ತೆಯೊಂದಿಗೆ ಜಗಳವಾಡಿ ಪತ್ನಿಯನ್ನು ಕಳುಹಿಸಿಕೊಡದಿದ್ದರೆ ಸುಮ್ಮನೆ ಬಿಡುವುದಿಲ್ಲ ಎಂದು ಗಲಾಟೆ ಮಾಡುತ್ತಿದ್ದನು. ಆ ಸಂದರ್ಭದಲ್ಲಿ ನೆರೆಹೊರೆಯವರು ಜಗಳ ಬಿಡಿಸಿ ನಾಗರಾಜನನ್ನು ಕಳುಹಿಸಿದ್ದರು. ಮತ್ತೆ ಮಾರನೇ ದಿನ ಜು.13ರಂದು ಬೆಳಗ್ಗೆ ತರಕಾರಿ ಮಾರುಕಟ್ಟೆ ಬಳಿ ಬಂದು ಅತ್ತೆ ಸೌಭಾಗ್ಯರೊಂದಿಗೆ ಜಗಳವಾಡಿ ಸಂಜೆ ಬರುವುದಾಗಿ ಹೋಗಿದ್ದನು.
ಅದೇ ದಿನ ಸಂಜೆ ತರಕಾರಿ ಮಾರುಕಟ್ಟೆ ಬಳಿ ಬಂದು ಅತ್ತೆ ಜೊತೆ ಜಗಳವಾಡುತ್ತಿದ್ದಾಗ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದ್ದು, ಸುತ್ತಿಗೆಯಿಂದ ಆಕೆಯ ತಲೆಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದನು.
ಈ ಬಗ್ಗೆ ಎಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಆರೋಪಿ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ ನಾಗರಾಜನನ್ನು ಪತ್ತೆಹಚ್ಚಿ ಬಂಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.