ವಿಧವೆ-ವಿಚ್ಛೇತ ಮಹಿಳೆಯರ ಟಾರ್ಗೆಟ್: ವಿಕೃತ ಮೆರೆದು ಸುಲಿಗೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಸೆರೆ

Social Share

ಬೆಂಗಳೂರು,ಜು.31- ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಬಲೆಗೆ ಬೀಳಿಸಿಕೊಂಡು ಅವರ ನಗ್ನಚಿತ್ರಗಳನ್ನು ಸೆರೆ ಹಿಡಿದು ಹಣ ಸುಲಿಗೆ ಮಾಡುತ್ತಿದ್ದ ಯುವತಿ ಸೇರಿದಂತೆ ಖತರ್‍ನಾಕ್ ಗ್ಯಾಂಗ್‍ನ್ನು ನಾಲ್ವರನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಮಂಗಳ, ರವಿ, ಶಿವಕುಮಾರ್ ಹಾಗೂ ಶ್ರೀನಿವಾಸ್ ಬಂಧಿತ ಗ್ಯಾಂಗ್‍ನ ಆರೋಪಿಗಳಾಗಿದ್ದಾರೆ. ಮಂಗಳ ಹಾಗೂ ರವಿ ದಂಪತಿಯಾಗಿದ್ದು, ತಂಡ ಕಟ್ಟಿಕೊಂಡು ವಿಚ್ಛೇದಿತ ಅಥವಾ ವಿಧವೆಯರನ್ನೇ ಈ ಗ್ಯಾಂಗ್ ಹುಡುಕುತ್ತಿತ್ತು. ಅವರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ ಮಂಗಳ, ಅವರಲ್ಲಿ ನಂಬಿಕೆ ಗಳಿಸಿಕೊಳ್ಳುತ್ತಿದ್ದಳು. ಬಳಿಕ ಫೋನ್ ಮಾಡಿ ಭೇಟಿ ಮಾಡಬೇಕು ಎಂದು ಕರೆಯುತ್ತಿದ್ದಳು.

ಭೇಟಿ ಮಾಡಲು ಬಂದ ಮಹಿಳೆಯರನ್ನು ಕಾರು ಹತ್ತಿಸಿಕೊಂಡು ಅಪಹರಿಸಿ ನಿರ್ಜನಪ್ರದೇಶದಕ್ಕೆ ಕರೆದುಕೊಂಡು ಹೋಗಿ, ಅಸಭ್ಯವಾಗಿ ವರ್ತಿಸಿ ಅವರಿಗೆ ನಗ್ನಗೊಳ್ಳುವಂತೆ ಒತ್ತಾಯಿಸುತ್ತಿದ್ದಳು. ಇದಕ್ಕೆ ಪ್ರತಿರೋಧ ತೋರಿಸಿದರೆ, ಹಲ್ಲೆ ಮಾಡಿ ಬೆದರಿಸಿ ಬಟ್ಟೆ ಬಿಚ್ಚಿಸಿ ಮೊಬೈಲ್‍ನಲ್ಲಿ ವಿಡಿಯೋ ಮಾಡಿಕೊಂಡು ಕಳುಹಿಸುತ್ತಿದ್ದಳು.

ಅದೇ ವಿಡಿಯೋವನ್ನು ಇಟ್ಟುಕೊಂಡು ಹೆದರಿಸಿ ಹಣ ದೋಚುತ್ತಿದ್ದ ಈ ಗ್ಯಾಂಗ್ ಮಹಾಲಕ್ಷ್ಮಿ ಲೇಔನ್‍ನ ಮಹಿಳೆಯೊಬ್ಬರಿಂದ ಒಂದು ಚಿನ್ನದ ಸರ, ಕಿವಿಯ ಓಲೆ ಹಾಗೂ ಉಂಗುರವನ್ನು ಕಸಿದು ಹೆದರಿಸಿ, 84 ಸಾವಿರ ರೂ. ಹಣವನ್ನು ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದೆ.

ಮತ್ತೆ ಮತ್ತೆ ಇದೇ ರೀತಿ ಕಿರುಕುಳ ನೀಡುವುದನ್ನು ಸಹಿಸಲಾರದೇ ಗ್ಯಾಂಗ್ ವಿರುದ್ಧ ಮಹಾಲಕ್ಷ್ಮಿಲೇಔಟ್ ಠಾಣೆಗೆ ಮಹಿಳೆ ದೂರು ನೀಡಿದ್ದಳು. ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರು ಬಂಧಿತರಿಂದ 12 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ, 70 ಸಾವಿರ ನಗದು, ಕೃತ್ಯಕ್ಕೆ ಬಳಸುತ್ತಿದ್ದ ಕಾರು, ಮೊಬೈಲ್ ಹಾಗೂ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

ನೆಲಮಂಗಲ, ಸೊನ್ನೆಕೊಪ್ಪ, ತಾವರೆಕೆರೆಯ ನಿರ್ಜನ ಪ್ರದೇಶಗಳನ್ನೇ ಕೃತ್ಯ ನಡೆಸಲು ಆರೋಪಿಗಳು ಆರಿಸಿಕೊಳ್ಳುತ್ತಿದ್ದರು. ಇದೇ ರೀತಿ ಹಲವರನ್ನು ಸುಲಿಗೆ ಮಾಡಿದ್ದು ಗ್ಯಾಂಗ್‍ನ ಇತರೆ ಚಟುವಟಿಕೆಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Articles You Might Like

Share This Article