ಅರುಂಧತಿ ಸಿನಿಮಾ ಹುಚ್ಚು : ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ

Social Share

ತುಮಕೂರು, ಆ.11- ತೆಲುಗಿನ ಅರುಂಧತಿ ಸಿನಿಮಾದ ಗೀಳು ಅಂಟಿಸಿಕೊಂಡ ಯುವಕ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರುವ ಘಟನೆ ಮಧುಗಿರಿ ತಾಲೂಕಿನ ಗಿಡ್ಡನಪಾಳ್ಯದಲ್ಲಿ ನಡೆದಿದೆ. ಗಿಡ್ಡನಪಾಳ್ಯದ ರೇಣುಕಯ್ಯ ಬೆಂಕಿ ಹಚ್ಚಿಕೊಂಡ ಯುವಕ. ಎಸ್‍ಎಸ್‍ಎಲ್‍ಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದ ಈತನನ್ನು ತುಮಕೂರಿನ ಕಾಲೇಜಿಗೆ ಸೇರಿಸಲಾಗಿತ್ತು. ನಂತರ ಹಾಸ್ಟೆಲ್ ವಿದ್ಯಾರ್ಥಿಗಳೊಂದಿಗೆ ಸಿನಿಮಾ ಗೀಳು ಅಂಟಿಸಿಕೊಂಡಿದ್ದ ಎನ್ನಲಾಗಿದೆ.

ತೆಲುಗಿನಲ್ಲಿ ತೆರೆಕಂಡಿದ್ದ ಅರುಂಧತಿ ಸಿನಿಮಾದಿಂದ ಪ್ರಭಾವಿತಗೊಂಡಿದ್ದ ಈತ ಪದೇ ಪದೇ ಈ ಸಿನಿಮಾ ವೀಕ್ಷಣೆ ಮಾಡುತ್ತಿದ್ದ ಎನ್ನಲಾಗಿದ್ದು, ವಿದ್ಯಾಭ್ಯಾಸ ಬಿಟ್ಟು ಮನೆಗೂ ಬರದೆ ತುಮಕೂರಿನಲ್ಲಿ ಉಳಿದುಕೊಂಡಿದ್ದ.

ಕಳೆದ ಭಾನುವಾರ ಊರಿಗೆ ಬಂದಿದ್ದಾಗಲೂ ತಂದೆ-ತಾಯಿ ಈತನಿಗೆ ಬುದ್ಧಿವಾದ ಹೇಳಿದರೂ ಸಹ ಅರುಂಧತಿ ನೋಡುವುದನ್ನು ಬಿಟ್ಟಿರಲಿಲ್ಲ. ಆ ಚಿತ್ರದ ಕೊನೆಯಲ್ಲಿ ಬೆಂಕಿಗೆ ಆಹುತಿಯಾಗುವುದನ್ನು ಪದೇ ಪದೇ ನೋಡಿ ಅದೇ ರೀತಿ ಬೆಂಕಿ ಹಚ್ಚಿಕೊಳ್ಳಲು 20 ಲೀಟರ್ ಪೆಟ್ರೋಲ್ ಖರೀದಿಸಿದ್ದ.

ಒಂದು ಜೊತೆ ಬಟ್ಟೆಯನ್ನು ಪ್ರತ್ಯೇಕವಾಗಿ ತಂದು, ನಿನ್ನೆ ಸಂಜೆ ರೇಷ್ಮೆ ಇಲಾಖೆ ನರ್ಸರಿ ಬಳಿಯ ನಿರ್ಜನ ಪ್ರದೇಶದಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಶಾಖ ತಡೆಯಲಾಗದೆ ರಸ್ತೆ ಕಡೆಗೆ ಓಡಿ ಬಂದು ಮುಕ್ತಿ ಕೊಡುವಂತೆ ಗೋಳಾಡಿದ್ದಾನೆ.

ರಸ್ತೆಯಲ್ಲಿ ಹೋಗುತ್ತಿದ್ದವರು ಈತನ ಚೀರಾಟ ಗಮನಿಸಿ ರಕ್ಷಿಸಿ, ಆಂಬುಲೆನ್ಸ್ ಮೂಲಕ ಮಧುಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ರವಾನಿಸಲಾಗಿದೆ.

Articles You Might Like

Share This Article