ನವದೆಹಲಿ, ಮಾ.10- ಭವಿಷ್ಯದಲ್ಲಿ ಅರವಿಂದ್ ಕೇಜ್ರಿವಾಲ್ ಬಿಜೆಪಿಗೆ ಪ್ರಮುಖ ಸವಾಲಾಗಲಿದ್ದು, ಅವರು ಪ್ರಧಾನಿಯಾಗುತ್ತಾರೆ ಎಂಬ ವಿಶ್ವಾಸವನ್ನು ಎಎಪಿ ಮುಖಂಡ ರಾಘವ್ ಚಡ್ಡಾ ವ್ಯಕ್ತಪಡಿಸಿದ್ದಾರೆ. ಪಂಜಾಬ್ ಚುನಾವಣಾ ಫಲಿತಾಂಶದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತಿ ಕಡಿಮೆ ಅವಧಿಯಲ್ಲಿ ಪಂಜಾಬ್‍ನಲ್ಲಿ ಆಮ್ ಆದ್ಮಿ ಪಕ್ಷ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವಲ್ಲಿ ಯಶಸ್ವಿಯಾಗಿದೆ. ಅಧಿಕಾರ ಚುಕ್ಕಾಣಿ ಹಿಡಿಯಲಿದೆ.
ಕಾಂಗ್ರೆಸ್ ಮುಖಂಡರ ನಡುವೆ ಉಂಟಾಗಿದ್ದ ರಾಜಕೀಯ ಕೆಸರೆರಚಾಟದ ಲಾಭ ಪಡೆಯುವಲ್ಲಿ ನಮ್ಮ ಪಕ್ಷ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ. ದೇಶದಲ್ಲಿ ಅತಿದೊಡ್ಡ ವಿರೋಧ ಪಕ್ಷವಾಗಿರುವ ಕಾಂಗ್ರೆಸ್‍ನ ಸ್ಥಾನವನ್ನು ಇದೀಗ ಎಎಪಿ ತುಂಬುತ್ತಿದ್ದು, ಮುಂಬರುವ ದಿನಗಳಲ್ಲಿ ಅತಿದೊಡ್ಡ ವಿರೋಧಪಕ್ಷವಾಗಿ ಹೊರಹೊಮ್ಮಲಿದ್ದೇವೆ ಎಂದು ಹೇಳಿದ್ದಾರೆ.
ಪಂಜಾಬ್‍ನಲ್ಲಿ ನಾವು ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆ ಮಾಡುತ್ತೇವೆ. ದಶಕಗಳಿಂದ ಇಲ್ಲಿ ಅಧಿಕಾರ ನಡೆಸಿರುವ ರಾಜಕೀಯ ಪಕ್ಷಗಳ ಬುಡ ಅಲ್ಲಾಡುತ್ತಿದೆ. ಭವಿಷ್ಯದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿಗೆ ಸವಾಗಾಲಿದ್ದಾರೆ ಎಂದು ಹೇಳಿದರು.
ಎಎಪಿ ಮುಖಂಡ ಮನೀಷ್ ಸಿಸೋಡಿಯಾ ಮಾತನಾಡಿ, ಕೇಜ್ರಿವಾಲ್ ಅವರ ಮಾದರಿಯ ಆಡಳಿತಕ್ಕೆ ಪಂಜಾಬ್ ಜನ ಮನಸೋತಿದ್ದು, ಇಲ್ಲಿ ಆಡಳಿತ ನಡೆಸಲು ಅವಕಾಶ ನೀಡಿದ್ದಾರೆ. ಈ ಮಾದರಿ ಮುಂದಿನ ದಿನಗಳಲ್ಲಿ ರಾಷ್ಟ್ರದ ತುಂಬೆಲ್ಲ ವಿಸ್ತರಣೆಯಾಗಲಿದೆ. 2012ರಲ್ಲಿ ಹುಟ್ಟಿಕೊಂಡಿರುವ ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಇದೀಗ ಪಂಜಾಬ್‍ನಲ್ಲಿ ಅಧಿಕಾರ ಹಿಡಿಯುತ್ತಿದೆ ಎಂದು ಹೇಳಿದರು.
