ಬಾಲಿವುಡ್ನ ಖ್ಯಾತನಾಮರ ಮಕ್ಕಳ ಮೇಲೆ ಎನ್ಸಿಬಿ ಕಣ್ಣು..!
ಮುಂಬೈ, ಅ,26- ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿರುವ ಆರ್ಯನ್ ಖಾನ್, ಬಾಲಿವುಡ್ನ ಖ್ಯಾತ ನಾಮರ ಮೂರು ಮಕ್ಕಳ ಜೊತೆಯಲ್ಲೂ ಮಾದಕ ವಸ್ತು ಕುರಿತಾಗಿ ಚಾಟ್ ಮಾಡಿದ್ದು, ಎನ್ಸಿಬಿ ಅವರ ಮೇಲೂ ನಿಗಾ ವಹಿಸಿದೆ.
ಮುಂಬೈನಿಂದ ಗೋವಾಕ್ಕೆ ತೆರಳುತ್ತಿದ್ದ ಐಶಾರಾಮಿ ಹಡಗಿನಲ್ಲಿ ಪತ್ತೆಯಾದ ಮಾದಕ ವಸ್ತು ಪ್ರಕರಣದಲ್ಲಿ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ದಳ (ಎನ್ಸಿಬಿ) ಬಾಲಿವುಡ್ನ ಮೆಗಾಸ್ಟಾರ್ ಶಾರುಕ್ ಖಾನ್ ಅವರ ಪುತ್ರ ಆರ್ಯನ್ಖಾನ್ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದೆ. ಮುಂದುವರೆದ ತನಿಖೆಯಲ್ಲಿ ಆರ್ಯನ್ ಖಾನ್ ಗೆಳತಿ ಅನನ್ಯ ಪಾಂಡೆಯನ್ನು ಎನ್ಸಿಬಿ ಎರಡು ಬಾರಿ ವಿಚಾರಣೆ ನಡೆಸಿದೆ.
ನಮ್ಮಿಬ್ಬರ ನಡುವೆ ಡ್ರಗ್ಸ್ಗೆ ಸಂಬಂಧಿಸಿದಂತೆ ಯಾವುದೇ ಚಾಟ್ ನಡೆದಿಲ್ಲ. ನಾವು ಮಾದಕ ವ್ಯಸನಿಗಳಲ್ಲ, ಮಾದಕ ವಸ್ತು ಖರೀದಿ-ಮಾರಾಟ ವ್ಯವಹಾರದಲ್ಲೂ ನಾವಿಲ್ಲ ಎಂದು ಅನನ್ಯ ಪಾಂಡೆ ಎನ್ಸಿಬಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದರು. ಆದರೆ ಆರ್ಯನ್ ಖಾನ್ ಫೋನ್ನಿಂದ ಬ್ಯಾಕ್ಅಪ್ ರಿಕವರಿ ಮಾಡಿರುವ ಎನ್ಸಿಬಿ ಅಧಿಕಾರಿಗಳು, ಅನನ್ಯ ಪಾಂಡೆ ಮತ್ತು ಆರ್ಯನ್ ಖಾನ್ ನಡುವೆ ನಡೆದಿರುವ ಚಾಟ್ನಲ್ಲಿ ಮಾದಕ ವಸ್ತು ಖರೀದಿ ವ್ಯವಹಾರ ಕುರಿತು ಚರ್ಚೆಯಾಗಿರುವುದನ್ನು ಪತ್ತೆ ಹಚ್ಚಿದೆ.
ಅಚಿತ್ ಕುಮಾರ್ ಎಂಬ ಡ್ರಗ್ ಡೀಲರ್ನಿಂದ 80 ಸಾವಿರ ರೂಪಾಯಿ ಮೌಲ್ಯದ ಗಾಂಜಾವನ್ನು ಖರೀದಿಗೆ ಆದೇಶ ನೀಡಿರುವುದಾಗಿ ಆರ್ಯನ್ ಚಾಟ್ನಲ್ಲಿ ಅನನ್ಯ ಪಾಂಡೆಗೆ ತಿಳಿಸಿದ್ದಾರೆ ಎಂದು ಎನ್ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಡ್ರಗ್ ಪೆಡ್ಲರ್ಗಳು ಮತ್ತು ಸರಬರಾಜುದಾರರು ತಮ್ಮ ಸಾಮ್ರಾಜ್ಯವನ್ನು ಬಾಲಿವುಡ್ನಲ್ಲಿ ವಿಸ್ತರಿಸಲು ಪ್ರಯತ್ನಿಸಿರುವುದನ್ನು ಎನ್ಸಿಬಿ ಗುರುತಿಸಿದೆ.
2019ರ ಜುಲೈನಲ್ಲಿ ನಡೆದಿರುವ ಚಾಟ್ನಲ್ಲಿ ಅನನ್ಯ ಸಣ್ಣ ಪ್ರಮಾಣದ ಸರಬರಾಜುದಾರಳಾಗಿದ್ದಳು ಎನ್ನಲಾಗಿದೆ. ಆರ್ಯನ್ ವೀಡ್ ಎಂದು ಕೇಳಿದ್ದಾನೆ. ಮಾದಕ ವಸ್ತುವಿಗೆ ವೀಡ್ ಎಂದು ಅಡ್ಡ ಹೆಸರು ಬಳಕೆ ಮಾಡಲಾಗುತ್ತಿದೆ. ಇದಕ್ಕೆ ಬೇಡಿಕೆ ಹೆಚ್ಚಿದೆ ಎಂದು ಅನನ್ಯ ಹೇಳಿದ್ದಾಳೆ. ನಾನು ಅದನ್ನು ನಿಮ್ಮಿಂದ ರಹಸ್ಯವಾಗಿ ತೆಗೆದುಕೊಳ್ಳುತ್ತೇನೆ ಎಂದು ಆರ್ಯನ್ ತಿಳಿಸಿದ್ದಾರೆ.ಸರಿ ಹಾಗಾದರೆ ಎಂದು ಅನನ್ಯ ಪ್ರತಿಕ್ರಿಯಿಸಿದ್ದಾಳೆ.
ಎರಡನೇ ಹಂತದ ಚಾಟ್ನಲ್ಲಿ ಅನನ್ಯ ನಾನು ಈಗ ಅದರ ವ್ಯವಹಾರದಲ್ಲಿದ್ದೇನೆ ಎಂದಿದ್ದಾಳೆ. ನೀನು ಅದನ್ನು ತಂದಿದ್ದೀಯಾ ಎಂದು ಆರ್ಯನ್ ಕೇಳಿದ್ದಾನೆ. ನಾನು ತರುತ್ತೇನೆ ಎಂದು ಅನನ್ಯ ಪ್ರತಿಕ್ರಿಯಿಸಿದ್ದಾಳೆ. ಇವು ಹಳೆಯ ಚಾಟ್ಗಳು ಎಂದು ಅನನ್ಯ ಈ ಮೊದಲಿನ ವಿಚಾರಣೆಯಲ್ಲಿ ಸ್ಪಷ್ಟ ಪಡಿಸಿದ್ದಳು.ನಾವು ಚರ್ಚೆ ಮಾಡಿದ್ದು ನಿಜ. ಆದರೆ ಅದು ಮಾದಕ ವಸ್ತು ಕುರಿತಾಗಿ ಅಲ್ಲ, ಸಿಗರೇಟ್ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದಿದ್ದಳು.
ಆರ್ಯನ್ ಫೋನ್ನಿಂದ ಮತ್ತಷ್ಟು ಚಾಟ್ಗಳನ್ನು ಮರುಗಳಿಕೆ ಮಾಡಿರುವ ಎನ್ಸಿಬಿ ಬಾಲಿವುಡ್ನ ಪ್ರಖ್ಯಾತ ಮೂವರು ಮಕ್ಕಳ ಜೊತೆ ಆತ ಚರ್ಚೆ ನಡೆಸಿರುವುದನ್ನು ಪತ್ತೆ ಹಚ್ಚಿದ್ದಾರೆ. ತನ್ನ ಸ್ನೇಹಿತರೊಬ್ಬರಿಗೆ ಆರ್ಯನ್ ಎನ್ಸಿಬಿ ಹೆಸರು ಹೇಳಿ ಬೆದರಿಕೆ ಕೂಡ ಹಾಕಿದ್ದಾನೆ.
ನಾಳೆ ಕೋಕೈನ್ ತೆಗೆದುಕೊಂಡು ಬಾ ಎಂದು ಆರ್ಯನ್ ಸ್ನೇಹಿತನಿಗೆ ಹೇಳಿದ್ದಾನೆ. ಎಲ್ಲಾ ಚಾಟ್ಗಳನ್ನು ಈ ಪ್ರಕರಣದಲ್ಲಿ ಸಾಕ್ಷ್ಯಗಳು ಎಂದು ಪರಿಗಣಿಸಲು ಎನ್ಸಿಬಿ ನಿರ್ಧರಿಸಿದೆ. ಆರ್ಯನ್ನ ಜಾಮೀನು ಅರ್ಜಿ ಇಂದು ಹೈಕೋರ್ಟ್ನಲ್ಲಿ ವಿಚಾರಣೆಗೆ ಬರಲಿದೆ. ಈಗಾಗಲೇ ಕೆಳ ಹಂತದ ನ್ಯಾಯಾಲಯಗಳು ಜಾಮೀನು ಅರ್ಜಿಯನ್ನು ತಳ್ಳಿ ಹಾಕಿವೆ. ಆರ್ಯನ್ ಪರ ವಕೀಲರು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಸಿಬಿ ಅಧಿಕಾರಿ ಸಮೀರ್ ವಾಂಕೇಡೆ ಮತ್ತು ಮಹಾರಾಷ್ಟ್ರ ರಾಜ್ಯ ಸರ್ಕಾರದ ಸಚಿವ ನವಾಬ್ ಮಲ್ಲಿಕ್ ಅವರ ನಡುವೆ ವ್ಯಕ್ತಿಗತ ನಿಂಧನೆ ನಡೆಯುತ್ತಿದೆ. ಸಮೀರ್ ಪ್ರಕರಣ ಮುಚ್ಚಿ ಹಾಕಲು 25 ಕೋಟಿ ರೂಪಾಯಿಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪಗಳಿವೆ.
ಜಾತಿ ಪ್ರಮಾಣ ಪತ್ರವನ್ನು ತಿರುಚಿ ಸಮೀರ್ ಉದ್ಯೋಗ ಗಿಟ್ಟಿಸಿದ್ದಾರೆ ಎಂದು ನವಾಬ್ ಆರೋಪಿಸಿದ್ದರು. ಈ ಎಲ್ಲಾ ಆರೋಪಗಳನ್ನು ಅಲ್ಲಗಳೆದಿರುವ ಸಮೀರ್, ನವಾಬ್ ಅವರ ಪತ್ರ ಮತ್ತು ಹೇಳಿಕೆ ಹಾಸ್ಯಾಸ್ಪದವಾಗಿದೆ. ಅವು ಸಂಪೂರ್ಣ ಸುಳ್ಳಿನ ಕಂತೆ. ಅವರಿಗೆ ಏನು ಮಾಡಬೇಕು ಎನಿಸುತ್ತದೆಯೋ ಅದನ್ನೇಲ್ಲಾ ಮಾಡಲಿ ಎಂದು ಸಮೀರ್ ಸವಾಲು ಹಾಕಿದ್ದಾರೆ.