ಅವಾಂತರ ಸೃಷ್ಟಿಸಿದ ಆಸಾನಿ ಚಂಡಮಾರುತ, ಜನಜೀವನ ಅಸ್ತವ್ಯಸ್ತ

ದಾವಣಗೆರೆ, ಮೇ 12- ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡ ಆಸಾನಿ ಚಂಡ ಮಾರುತ ಪರಿಣಾಮ ಜಿಲ್ಲೆಯ ವಿವಿಧೆಡೆ ಭಾರೀ ಮಳೆಯಿಂದಾಗಿ ಜನ ತತ್ತರಿಸಿದರು. ಸೈಕ್ಲೋನ್ ಎಫೆಕ್ಟ್‍ನಿಂದ ಕಳೆದ 2-3 ದಿನದಿಂದಲೂ ಮೋಡ ಮುಸುಕಿದ ವಾತಾವರಣವಿದ್ದು, ನಿನ್ನೆ ಬೆಳಗ್ಗೆಯಿಂದಲೇ ಅದೇ ಪರಿಸ್ಥಿತಿ ಇತ್ತು. ಮಧ್ಯಾಹ್ನ ಇದ್ದಕ್ಕಿದ್ದಂತೆ ಕಪ್ಪು ಮೋಡಗಳು ಆವರಿಸಿ, ನೋಡ ನೋಡುತ್ತಿದ್ದಂತೆ ರಭಸದಿಂದ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಯಿತು. ಚರಂಡಿ, ಒಳ ಚರಂಡಿಗಳು ತುಂಬಿ ಹರಿಯಲಾರಂಭಿಸಿದವು.

ಕೆಲ ದಿನಗಳಿಂದ ರಾತ್ರಿ ಮಳೆ ಸುರಿಯುತ್ತಿದ್ದುದರಿಂದ ಜನರಿಗೆ ಅಷ್ಟಾಗಿ ಸಮಸ್ಯೆಯಾಗಿರಲಿಲ್ಲ. ಆದರೆ, ಮಧ್ಯಾಹ್ನ 2 ಗಂಟೆ ನಂತರ ಜೋರು ಮಳೆ ಶುರುವಾಗಿ ಗಾಳಿ, ಮಿಂಚು, ಸಿಡಿಲು, ಗುಡುಗಿನ ಆರ್ಭಟವಿಲ್ಲದೆ, ಒಂದೇ ಸಮನೆ ಸುರಿದ ದೊಡ್ಡ ಹನಿಯ ಮಳೆ ಹೊಡೆತಕ್ಕೆ ಇಡೀ ಊರು ಸ್ತಬ್ಧವಾಯಿತು. ಜೋರು ಮಳೆಯಿಂದಾಗಿ ರಸ್ತೆ, ಚರಂಡಿಗಳಲ್ಲಿ ನೀರು ಪ್ರವಾಹದೋಪಾದಿಯಲ್ಲಿ ಉಕ್ಕಿ ಹರಿದವು.

ಎತ್ತರ ಪ್ರದೇಶದ ನೀರು ಚರಂಡಿಗಳ ಕಡೆಗೆ ನುಗ್ಗಿ ಹರಿಯುತ್ತಿದ್ದರಿಂದ ರಸ್ತೆ ಯಾವುದೆಂಬುದೇ ಗೊತ್ತಾಗದಂತಾಗಿತ್ತು. ಮಳೆಯಿಂದಾಗಿ ಪಾದಚಾರಿಗಳು ಆಟೋ ರಿಕ್ಷಾ, ಬಸ್ಸುಗಳನ್ನೇರಿ ಮನೆ ತಲುಪಿದರು. ಮತ್ತೆ ಕೆಲವರು ಮಳೆ ನಿಲ್ಲುವವರೆಗೂ ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆದರು.

ಪಾಲಿಕೆ, ಸ್ಮಾರ್ಟ್ ಸಿಟಿ, ಜಲಸಿರಿ ಹೀಗೆ ನಾನಾ ಯೋಜನೆಗಳಡಿ ಜಿಲ್ಲಾ ಕೇಂದ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗೆ ತೆಗೆದಿದ್ದ ಗುಂಡಿಗಳಲ್ಲಿ ನೀರು ತುಂಬಿದರೆ, ಮತ್ತೆ ಕೆಲ ಕಡೆ ಕಾಮಗಾರಿ ಮುಗಿದು ಮಣ್ಣು ಮುಚ್ಚಿದ್ದ ಸ್ಥಳದಲ್ಲಿ ನೆಲವೇ ಕುಸಿದಿದೆ. ಪಿ.ಜೆ. ಬಡಾವಣೆಯ ಚೇತನ ಹೊಟೆಲ್ ಬಳಿ ವಿಜಯ ನಗರ ಜಿಲ್ಲೆ ಕೊಟ್ಟೂರಿನ ಈಶ್ವರಗೌಡ ಎಂಬುವರ ಐಷಾರಾಮಿ ಕಾರು ರಸ್ತೆಬದಿ ಗುಂಡಿಗೆ ಸಿಲುಕಿತ್ತು. ಸ್ಥಳೀಯ ವ್ಯಾಪಾರಸ್ಥರು, ಸಾರ್ವಜನಿಕರ ನೆರವಿನಿಂದ ವಾಹನ ರಸ್ತೆಗೆ ತಳ್ಳಲಾಯಿತು.

ಮಳೆ ಅವಾಂತರದಿಂದಾಗಿ ನಗರದ ಕೊಳಗೇರಿ, ಹಿಂದುಳಿದ ಪ್ರದೇಶಗಳ ಜನಜೀವನ ಅಸ್ತವ್ಯಸ್ತವಾಗಿತ್ತು. ಅನೇಕ ಕಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದರೆ, ಮತ್ತೆ ಕೆಲ ಕಡೆ ಮಣ್ಣು ರಸ್ತೆಗಳಲ್ಲಿ ಸಂಚರಿಸಲಾಗದೇ ಜನರು ಪಾಲಿಕೆಗೆ ಹಿಡಿಶಾಪ ಹಾಕುತ್ತಾ ಮನೆ ತಲುಪಿದರು.

ಜಿಲ್ಲೆಯ ವಿವಿಧೆಡೆ ಜೋರು ಮಳೆಯಿಂದಾಗಿ ಮೆಕ್ಕೆಜೋಳ, ಭತ್ತ ಸೇರಿದಂತೆ ವಿವಿಧ ಕೃಷಿ ಬೆಳೆಗಳು, ತೋಟದ ಬೆಳೆಗಳು ಹಾನಿಯಾಗಿರುವುದು ವರದಿಯಾಗಿದೆ. ಕೆಲ ಮನೆಗಳಿಗೂ ತೀವ್ರ ಹಾನಿಯಾಗಿರುವ ಮಾಹಿತಿಗಳು ಲಭ್ಯವಾಗಿವೆ. ಹಿಂದುಳಿದ ಪ್ರದೇಶ, ತಗ್ಗು ಪ್ರದೇಶ, ಹೆಂಚಿನ, ತಗಡು ಶೀಟಿನ ಮನೆಗಳು, ಕೊಳಗೇರಿಗಳ ಜನರು ಬಹಳ ಸಂಕಷ್ಟಕ್ಕೀಡಾಗಿದ್ದಾರೆ.