ಬಿಜೆಪಿ ಸೇರಿದ ಖಾನ್ಪುರ ಮಾಜಿ ಪೊಲೀಸ್ ಆಯುಕ್ತ

Social Share

ಉತ್ತರ ಪ್ರದೇಶ (ಲಖನೌ), ಜ.16- ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ವಿವಿಧ ಪಕ್ಷಗಳಿಗೆ ಸೇರ್ಪಡೆ ಹಾಗೂ ಪಕ್ಷಗಳನ್ನು ತೊರೆಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ಸಮ್ಮುಖದಲ್ಲಿ ಐಪಿಎಸ್ ಮಾಜಿ ಅಧಿಕಾರಿ ಅಸೀಮ್ ಅರುಣ್ ಅವರು ಬಿಜೆಪಿಗೆ ಸೇರ್ಪಡೆಯಾದರು.
ಖಾನ್ಪುರ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಅಸೀಮ್ ಅರುಣ್ ಅವರು ಈ ತಿಂಗಳ ಆರಂಭದಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಷ್ಟ್ರದ ಅಭಿವೃದ್ಧಿಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಮಾರ್ಗವನ್ನು ನೀಡಿದ್ದಾರೆ. ಅದರಿಂದ ನಾನು ಪ್ರಭಾವಿತನಾಗಿದ್ದೇನೆ. ರಾಜಕೀಯ ಕಾರ್ಯಗಳ ಮೂಲಕ ಹೆಚ್ಚಿನ ಕೊಡುಗೆ ನೀಡಲು ಬಿಜೆಪಿಗೆ ಸೇರಿದ್ದೇನೆ. ನನ್ನ ಸೇವಾವಯಲ್ಲಿ ನಾನು ಮಾಡಲು ಸಾಧ್ಯವಾಗದಿರುವುದು ಬಹಳಷ್ಟಿದೆ.
ಹಾಗಾಗಿ ರಾಜಕೀಯಕ್ಕೆ ಸೇರಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಫೆ.10ರಂದು ಮತ ಎಣಿಕೆ ನಡೆಯಲಿದೆ.
ಕಳೆದ ಎರಡು ದಿನಗಳ ಹಿಂದೆಯಷ್ಟೆ ಬಿಜೆಪಿ 107 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ 20 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿ 21 ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

Articles You Might Like

Share This Article