ಬೆಂಗಳೂರಲ್ಲಿ ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ

ಬೆಂಗಳೂರು, ಮೇ 17- ಆಶಾ ಕಾರ್ಯ ಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫ್ರೀಡಂಪಾರ್ಕ್‍ನಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿದರು.ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಆಶಾ ಕಾರ್ಯಕರ್ತೆಯರು ಎಐಟಿಯುಸಿ ನೇತೃತ್ವದಲ್ಲಿ ಫ್ರೀಡಂಪಾರ್ಕ್‍ನಲ್ಲಿ ಸಮಾವೇಶಗೊಂಡು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

ಆರ್‍ಸಿಎಚ್ ಫೋರ್ಟಲ್ ಡೇಟಾ ಎಂಟ್ರಿ ಸಮಸ್ಯೆ ಬಗೆಹರಿಸಬೇಕು. ಕೊರೊನಾ ವೇಳೆ ಮೃತಪಟ್ಟ ಆಶಾ ಕಾರ್ಯಕರ್ತೆಯರಿಗೆ 50 ಲಕ್ಷ ಪರಿಹಾರ ಬಿಡುಗಡೆ ಮಾಡಬೇಕು. ವೇತನ ಮುಂಬಡ್ತಿ, ನಿವೃತ್ತಿ ವೇತನ, ಇಪಿಎಫ್, ಇಎಸ್‍ಐ ಮತ್ತಿತರ ಸೌಲಭ್ಯಗಳನ್ನು ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಆಶಾ ಕಾರ್ಯಕರ್ತೆಯರಿಂದ ಆರೋಗ್ಯ ಇಲಾಖೆಯ ಇತರೆ ಕೆಲಸಗಳು ಮತ್ತು ಸರ್ಕಾರದ ಕೆಲಸಗಳನ್ನು ಮಾಡಿಸಬಾರದು. ಅವರಿಗೆ ನಿಗದಿ ಪಡಿಸಿದ ಕೆಲಸಕ್ಕಷ್ಟೇ ಸೀಮಿತಗೊಳಿಸಬೇಕು ಎಂದು ಅವರು ಹೇಳಿದರು. ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.