ನಾಳೆಯಿಂದ ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ

Spread the love

ಬೆಂಗಳೂರು,ಮೇ.16- ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಾಳೆಯಿಂದ ಆಶಾ ಕಾರ್ಯಕರ್ತೆಯರು ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸುವ ಆಶಾ ಕಾರ್ಯಕರ್ತೆಯರು ನಾಳೆ ನಗರಕ್ಕೆ ಆಗಮಿಸುತ್ತಿರುವುದರಿಂದ ಸಿಲಿಕಾನ್ ಸಿಟಿ ಪಿಂಕ್ ಸಿಟಿಯಾಗಿ ಮಾರ್ಪಾಡಾಗಲಿದೆ.

ತಮ್ಮ ಬೇಡಿಕೆ ಈಡೇರಿಸುವಂತೆ ಈಗಾಗಲೆ ಹಲವು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗದಿರುವ ಹಿನ್ನಲೆಯಲ್ಲಿ ನಾಳೆಯಿಂದ ಬೃಹತ್ ಹೋರಾಟ ನಡೆಸಲು ಆಶಾ ಕಾರ್ಯಕರ್ತೆಯರು ತೀರ್ಮಾನಿಸಿದ್ದಾರೆ. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಲಿರುವ ಸಾವಿರಾರು ಆಶಾ ಕಾರ್ಯಕರ್ತೆಯರು ನಗರದ ಫ್ರೀಡಂ ಪಾರ್ಕ್‍ನಲ್ಲಿ ಎಐಟಿಯುಸಿ ಕಾರ್ಮಿಕ ಸಂಘಟನೆ ಮುಖಂಡರೊಂದಿಗೆ ಪ್ರತಿಭಟನೆ ನಡೆಸಲಿದ್ದಾರೆ.

ನಾವು ಕಳೆದ ಹದಿನೈದು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರೂ ನಮ್ಮ ಪ್ರೋತ್ಸಾಹ ಧನ ಹೆಚ್ಚಾಗಿಲ್ಲ. ಕೊರೊನಾ ಸಂದರ್ಭದಲ್ಲಿ ವಾರಿಯರ್ಸ್‍ಗಳಾಗಿ ದಿನದ 24 ಗಂಟೆಗಳ ಕಾಲ ಸೇವೆ ಸಲ್ಲಿಸಿದ್ದೇವೆ.ಆದರೂ ನಮಗೆ ಕೆಲಸಕ್ಕೆ ತಕ್ಕ ಸಂಬಳ ಮಾತ್ರ ಕೊಡದೆ ಸರ್ಕಾರ ಅನ್ಯಾಯ ಮಾಡಿದೆ ಎಂದು ಆಶಾ ಕಾರ್ಯಕರ್ತೆಯರು ಆರೋಪಿಸಿದ್ದಾರೆ.

ರಾಜ್ಯ ಸರ್ಕಾರದಿಂದ ಐದು ಸಾವಿರ ಮತ್ತು ಕೇಂದ್ರ ಸರ್ಕಾರದಿಂದ ಮೂರು ಸಾವಿರ ರೂ.ಗಳ ಪ್ರೋತ್ಸಾಹ ಧನ ನಿಗ ಮಾಡಲಾಗಿದೆ. ಆದರೆ, ನಮಗೆ ಕೇಂದ್ರದ ಪ್ರೋತ್ಸಾಹ ಧನದಲ್ಲಿ ಕೇವಲ 650 ರೂ.ಗಳು ಮಾತ್ರ ಸಿಗುತ್ತಿದೆ ಎಂದು ಅವರು ದೂರಿದ್ದಾರೆ. ಹೀಗಾಗಿ ನಮಗೆ ಪ್ರೋತ್ಸಾಹಧನ ಹಾಗೂ ಗೌರವಧನ ಎರಡನ್ನು ಒಗ್ಗೂಡಿಸಿ ಮಾಸಿಕ ವೇತನ ನೀಡಬೇಕು ಎನ್ನುವುದು ಆಶಾ ಕಾರ್ಯಕರ್ತೆಯರ ಆಗ್ರಹವಾಗಿದೆ.

ಈ ಪೋರ್ಟಲ್ ಡಾಟಾ ಎಂಟ್ರಿ ಸಮಸ್ಯೆ ಬಗೆಹರಿಸಿ ಅದರಿಂದ ಆಶಾ ಕಾರ್ಯಕರ್ತೆಯರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎನ್ನುವುದು ಸೇರಿದಂತೆ ತಮ್ಮ ಇತರ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಾಳೆಯಿಂದ ಪ್ರತಿಭಟನೆ ನಡೆಸಲು ಆಶಾ ಕಾರ್ಯಕರ್ತೆಯರು ಮುಂದಾಗಿದ್ದಾರೆ.