ಬೆಂಗಳೂರು,ಮಾ.3-ಸರ್ಕಾರ ಕೊಟ್ಟ ಮಾತು ತಪ್ಪಿ ನಮ್ಮ ಬೇಡಿಕೆ ಈಡೇರಿಸದಿದ್ದರೆ ಮಾ.7 ರಿಂದ ಅರ್ನಿಷ್ಟಾವ ಅಹೋರಾತ್ರಿ ಧರಣಿ ನಡೆಸ ಲಾಗುವುದು ಎಂದು ರಾಜ್ಯ ಅಂಗನವಾಡಿ ಕಾರ್ಯ ಕರ್ತೆಯರು ಮತ್ತು ಸಹಾಯಕಿಯ ಫೆಡರೇಷನ್ ಎಚ್ಚರಿಸಿದೆ.
ನಾಳೆಯಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಬಜೆಟ್‍ನಲ್ಲಿ ನಮ್ಮ ಬೇಡಿಕೆ ಈಡೇರಿಸ ಬೇಕು ಇಲ್ಲದಿದ್ದರೆ 7 ರಿಂದ ಅಹೋರಾತ್ರಿ ಧರಣೆ ನಡೆಸಲಾಗುವುದು ಎಂದು ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಜಯಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್‍ಗೆ ಪತ್ರ ಬರೆದು ಎಚ್ಚರಿಕೆ ನೀಡಿದ್ದಾರೆ.
ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ನಾವು ಈಗಾಗಲೇ ಸರ್ಕಾರಕ್ಕೆ ಎರಡು ಬಾರಿ ಮನವಿ ಮಾಡಿಕೊಂಡಿದ್ದೇವೆ. ಸರ್ಕಾರ ಕೂಡ ಮುಂದಿನ ಬಜೆಟ್‍ನಲ್ಲಿ ನಿಮ್ಮ ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದೆ. ಹೀಗಾಗಿ ನಾವು ಬಜೆಟ್ ಮಂಡನೆಯ ನಿರೀಕ್ಷೆಯಲ್ಲಿ ದ್ದೇವೆ. ನಾಳೆ ಮಂಡನೆಯಾಗಲಿರುವ ಬಜೆಟ್‍ನಲ್ಲಿ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸುವ ಭರವಸೆ ಇದೆ.
ಒಂದು ವೇಳೆ ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಮಾ.7 ರಿಂದ ನಗರದ ಫ್ರೀಡಂ ಪಾರ್ಕ್‍ನಲ್ಲಿ ಅಹೋರಾತ್ರಿ ಧರಣೆ ನಡೆಸಲಾಗುವುದು ಎಂದು ಜಯಮ್ಮ ತಿಳಿಸಿದ್ದಾರೆ.
# ಬೇಡಿಕೆಗಳೇನು:
ಸೇವಾ ಹಿರಿತನದ ಆಧಾರದ ಮೇಲೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಮಾಸಿಕ ವೇತನ 21 ಸಾವಿರ ರೂ.ಗಳಿಗೆ ಏರಿಕೆ ಮಾಡುವುದು.ಮಿನಿ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಬೇಕು. ಎಲ್‍ಕೆಜಿ ಮತ್ತು ಯುಕೆಜಿಗಳನ್ನು ಮುಂದಿನ ವರ್ಷದಿಂದ ಅಂಗನವಾಡಿಗಳಿಗೆ ಸೇರ್ಪಡೆ ಮಾಡಬೇಕು. ಶಿಶುಪಾಲನಾ ಕೇಂದ್ರಗಳನ್ನು ಅಂಗನವಾಡಿ ಕೇಂದ್ರಗಳಲ್ಲೇ ನಡೆಸುವ ತೀರ್ಮಾನ ಕೈಬಿಡಬೇಕು. ಮರಣ ಹಾಗೂ ವೈದ್ಯಕೀಯ ಪರಿಹಾರ ಧನವನ್ನು ತುರ್ತು ಬಿಡುಗಡೆ ಮಾಡಬೇಕು.
ಅನಾರೋಗ್ಯ ಪೀಡಿತರು ಹಾಗೂ ಅಶಕ್ತರಿಗೆ ಗೌರವಧನ ನೀಡಿ ಸೇವೆಯಿಂದ ಬಿಡುಗಡೆ ಮಾಡಬೇಕು. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಅವಲಂಭಿತರಿಗೆ ಉಚಿತ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು ಮತ್ತು ಬಿಎಲ್‍ಒ ಜವಾಬ್ದಾರಿಯಿಂದ ಬಿಡುಗಡೆ ಮಾಡಬೇಕು ಎನ್ನುವುದು ಪ್ರಮುಖ ಬೇಡಿಕೆಗಳಾಗಿವೆ.
