ಜೈಪುರ, ಆ.28 (ಪಿಟಿಐ)-ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೆಸರು ಕೇಳಿ ಬರುತ್ತಿರುವ ಸಂದರ್ಭದಲ್ಲೇ ಅವರು ಮತ್ತೊಮ್ಮೆ ರಾಜಸ್ಥಾನದ ಮುಖ್ಯಮಂತ್ರಿ ಗದ್ದುಗೆ ಏರುವ ಕನಸು ಕಾಣುತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಮತ್ತೊಮ್ಮೆ ಸಿಎಂ ಗಾದಿ ಏರುವ ನಿಟ್ಟಿನಲ್ಲಿ ಗೆಹ್ಲೋಟ್ ಈಗಾಗಲೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ.
ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸುವತ್ತ ಗಮನ ಹರಿಸಿರುವ ಅವರು, ರಾಜ್ಯದಲ್ಲಿ ದೊಡ್ಡ ದೊಡ್ಡ ಸಮಾವೇಶಗಳನ್ನು ನಡೆಸಲು ಮುಂದಾಗಿದ್ದಾರೆ. ನಾಳೆ ಗ್ರಾಮೀಣ ಒಲಿಂಪಿಕ್ ಕ್ರೀಡಾಕೂಟ ಆಯೋಜಿಸಲಾಗಿದ್ದು, ಈ ಕ್ರೀಡಾಕೂಟದಲ್ಲಿ ಪುರುಷರು ಮತ್ತು ಮಹಿಳೆಯರು ಸೇರಿದಂತೆ ಸುಮಾರು 30 ಲಕ್ಷ ಜನರು ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಹಿಂದೆ, ಗೆಹ್ಲೋಟ್ ಸರ್ಕಾರವು ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಪುನಶ್ಚೇತನ, ಸರ್ಕಾರಿ ಆಸ್ಪತ್ರೆಗಳಲ್ಲಿ ಒಪಿಡಿಯಲ್ಲಿ ಉಚಿತ ಚಿಕಿತ್ಸೆ, 10 ಲಕ್ಷ ರೂ.ಗಳ ಆರೋಗ್ಯ ವಿಮೆ, ವಿದ್ಯುತ್ ಬಿಲ್‍ಗಳಲ್ಲಿ ಸಹಾಯಧನ, ನರೇಗಾ ಮಾದರಿಯಲ್ಲಿ ನಗರ ಉದ್ಯೋಗ ಖಾತರಿ ಯೋಜನೆ ಮತ್ತು ವಿತರಣೆಯನ್ನು ಘೋಷಿಸಿತ್ತು. 1.33 ಕೋಟಿ ಮಹಿಳೆಯರಿಗೆ ಸ್ಮಾರ್ಟ್ ಫೋನ್‍ಗಳನ್ನು ನೀಡಲಾಗಿದೆ.
ಆದಾಗ್ಯೂ, ಗೆಹ್ಲೋಟ್ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ವಿರೋಧ ಪಕ್ಷದಲ್ಲಿರುವ ಬಿಜೆಪಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಮತ್ತು ದಲಿತರ ಸ್ಥಿತಿಗತಿ ವಿಚಾರವನ್ನು ಮುಂದಿಟ್ಟುಕೊಂಡು ಗೆಹ್ಲೊಟ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.
ಆದರೆ ಮುಖ್ಯಮಂತ್ರಿಗಳು ತಮ್ಮ ಹಿಂದಿನ ಅನುಭವಗಳಿಂದ ಪಾಠ ಕಲಿತಿದ್ದಾರೆ. ಅವರು ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಾಗಿನಿಂದ ಅವರು ಬಹು ಆಯಾಮದ ವಿಧಾನದೊಂದಿಗೆ ಕೆಲಸ ಮಾಡುತ್ತಿದ್ದಾರೆ. ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಸಮಾಜದ ಪ್ರತಿಯೊಂದು ವರ್ಗವನ್ನು ಮುಟ್ಟಲು ಗೆಹ್ಲೋಟ್ ಹಲವಾರು ನಿರ್ಧಾರಗಳನ್ನು ಕೈಗೊಂಡಿದ್ದು, ಮುಂದಿನ ಚುನಾವಣೆ ಮೇಲೆ ಗಮನ ಹರಿಸಿದ್ದಾರೆ ಎಂದು ಕೆಲವು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
ನಾಳಿನ ಕ್ರೀಡಾಕೂಟದಲ್ಲಿ ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಪ್ರಮುಖವಾಗಿ ಜನರಿಗೆ ಮುಟ್ಟಿಸಲು ಕ್ರಮ ವಹಿಸಲಾಗಿದೆ ಎಂದು ಕ್ರೀಡಾ ಸಚಿವ ಅಶೋಕ್ ಚಂದ್ನಾ ಹೇಳಿದರು.
ಸುಮಾರು 30 ಲಕ್ಷ ಜನರು ಭಾಗವಹಿಸುತ್ತಿರುವುದು ಕ್ರೀಡಾಕೂಟದ ಇತಿಹಾಸದಲ್ಲಿ ಇದೇ ಮೊದಲು ಎಂದು ಅವರು ಹೇಳಿದರು. ಇದರ ರಾಜಕೀಯ ಲಾಭದ ಬಗ್ಗೆ ಕೇಳಿದಾಗ, ಸಮಯವು ಇದನ್ನು ಹೇಳುತ್ತದೆ ಆದರೆ ಸಾರ್ವಜನಿಕರಿಂದ ಪ್ರತಿಕ್ರಿಯೆ ನಿಜವಾಗಿಯೂ ತುಂಬಾ ದೊಡ್ಡದಾಗಿದೆ. ಒಳ್ಳೆಯ ಕೆಲಸ ಮಾಡಿದಾಗ, ಅದು ಖಂಡಿತವಾಗಿಯೂ ಸಕಾರಾತ್ಮಕ ಸ್ಪಂದಿಸುತ್ತಾರೆ ಎಂದು ಚಂದನಾ ಹೇಳಿದರು.
ಈ ಕ್ರೀಡಾಕೂಟದ ಮೂಲಕ 1 ಕೋಟಿಗೂ ಹೆಚ್ಚು ಜನರನ್ನು ನೇರವಾಗಿ ಮತ್ತು ಪರೋಕ್ಷವಾಗಿ ಮುಟ್ಟಲಿದ್ದೇವೆ ಎಂದು ಪಕ್ಷದ ಮೂಲಗಳು ಉಲ್ಲೇಖಿಸಿವೆ.