ಬೆಂಗಳೂರು, ಫೆ.16- ರಾಜಕೀಯವಾಗಿ ವಿರೋಧ ಮಾಡುತ್ತಿದ್ದೇನೆ ವಿನಃ ವೈಯಕ್ತಿಕವಾಗಿ ಅಲ್ಲ. ಹೀಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನನ್ನ ಹೇಳಿಕೆಯಿಂದ ವೈಯಕ್ತಿಕವಾಗಿ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವುದಾಗಿ ಉನ್ನತ ಸಚಿವ ಅಶ್ವತ್ಥ್ ನಾರಾಯಣ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಪ್ರಜಾಪ್ರಭುತ್ವದಲ್ಲಿ ಇದ್ದೇವೆ. ಯುದ್ಧದ ಕಾಲದಲ್ಲಿ ಇಲ್ಲ. ಪ್ರಜಾಪ್ರಭುತ್ವದಲ್ಲಿ ಗೆಲ್ಲಬೇಕಿದೆ. ಆ ವಿಚಾರವಾಗಿ ಹೇಳಿದ್ದೇನೆ ಹೊರತು ಬೇರೆ ರೀತಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ರಾಜಕೀಯವಾಗಿ ವಿರೋಧ ಮಾಡುತ್ತಿದ್ದೇನೆ ವಿನಃ ನನ್ನ ಮಾತಿನ ಉದ್ದೇಶ ವೈಯಕ್ತಿಕವಾಗಿ ಅಲ್ಲ. ಮಂಡ್ಯದಲ್ಲಿ ಕಸಬಾ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಉದ್ದೇಶಿಸಿ ಮಾತನಾಡುವಾಗ ಟಿಪ್ಪು ಹೆಸರು ಉಲ್ಲೇಖ ಮಾಡಿದೆ. ಟಿಪ್ಪು ಜಯಂತಿಯನ್ನು ಕಾಂಗ್ರೆಸ್ ಮಾಡುತ್ತಿದೆ.
ಅದನ್ನು ಖಂಡಿಸುವಂತೆ ಆಗಬೇಕು ಎಂದು ಜನರಿಗೆ ನಾನು ಸ್ಪಷ್ಟವಾಗಿ ಹೇಳಿದೆ.ಬರುವ ಚುನಾವಣೆಯಲ್ಲಿ ಜನರ ಬೆಂಬಲ ನಮ್ಮ ಪರವಾಗಿ ಪಡೆದುಕೊಳ್ಳಬೇಕು ಎಂದು ಹೇಳಿರುವುದಾಗಿ ತಿಳಿಸಿದರು.
ಇವರ ಹಾಗೆ ಮುಖ್ಯಮಂತ್ರಿಗೆ ನಾಯಿ, ಪ್ರಧಾನಿಗೆ ನರ ಹಂತಕ, ಜಾತಿ, ಧರ್ಮ ಆಧಾರಿತವಾಗಿ ಸಮಾಜ ಒಡೆಯುವ ಕೆಲಸ ಮಾಡಿಲ್ಲ. ಇವರ ಹಾಗೆ ವೈಯಕ್ತಿಕವಾಗಿ ವಿರೋಧ ಮಾಡಿಲ್ಲ. ಮತ ಗೆಲ್ಲಬೇಕೇ ವಿನಃ ಮತ್ತೆ ಬೇರೇನೂ ಅಲ್ಲ ಎಂದು ಹೇಳಿದರು.
# ಜನರೇ ಬುದ್ಧಿ ಕಲಿಸುತ್ತಾರೆ : ಯು.ಟಿ.ಖಾದರ್
ಸಚಿವ ಅಶ್ವತ್ಥ್ ನಾರಾಯಣ್ ಹಾಗೂ ಬಿಜೆಪಿಯವರು ಮೀರ್ ಸಾದಿಕ್ ವಂಶಸ್ಥರು ಎಂದು ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಯು. ಟಿ. ಖಾದರ್ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇರವಾಗಿ ಹೋರಾಟ ಮಾಡುವ, ಚರ್ಚೆ ಮಾಡುವ ಧೈರ್ಯ ಅವರಿಗೆ ಇಲ್ಲ ಎಂದರು. ಮಹಾತ್ಮ ಗಾಂಧೀಜಿ ಅವರನ್ನು ಕೊಂದವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಗೋಡ್ಸೆ ವಂಶಸ್ಥರು.
ಇವರು ಹೊಡೆದುಹಾಕಲು ನೋಡಿದರೆ, ಕಾಂಗ್ರೆಸ್ ನಾಯಕರನ್ನು ಜನರೇ ಮೂರನೇ ಮಹಡಿಗೆ ತಂದು ಕೂರಿಸುತ್ತಾರೆ. ರಾಜ್ಯದ ಜನರೇ ಇವರಿಗೆ ಉತ್ತರವನ್ನೂ ಕೊಡುತ್ತಾರೆ ಎಂದು ಹೇಳಿದರು.
#AshwathNarayan, #regrets, #statement, #Siddaramaiah,