ಸಫಾರಿ ವೇಳೆ ಜೀಪ್ ಬ್ಯಾನೆಟ್ ಮೇಲೆ ಕುಳಿತು ಸಿಗರೇಟು ಸೇದಿದ ಹಿರಿಯ ಅಧಿಕಾರಿ

Social Share

ಮೊರಿಗಾಂವ್,ಜ.17- ಅಸ್ಸಾಂನ ಪೊಬಿತೋರಾ ವನ್ಯಜೀವಿ ಅಭಯಾರಣ್ಯ ಪ್ರದೇಶದಲ್ಲಿ ಇಬ್ಬರು ಐಎಎಸ್ ಮತ್ತಿ ಒಬ್ಬ ಐಪಿಎಸ್ ಅಧಿಕಾರಿಗಳು ಕುಟುಂಬ ಸಮೇತರಾಗಿ ನಿಯಮ ಮೀರಿ ಸಫಾರಿ ನಡೆಸಿದ್ದು, ಅವರಲ್ಲಿ ಒಬ್ಬ ಅಧಿಕಾರಿ ಜೀಪ್‍ನ ಬ್ಯಾನೇಟ್ ಮೇಲೆ ಕುಳಿತು ಸಿಗರೇಟು ಸೇದಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.

ಅಸ್ಸಾಂ ರಾಜ್ಯದಲ್ಲಿ ಈ ಪ್ರವಾಸ ಭಾರೀ ವಿವಾದ ಸೃಷ್ಟಿಸಿದೆ. ಖುದ್ದು ಅರಣ್ಯ ಸಚಿವ ಚಂದ್ರ ಮೋಹನ್ ಪಟೌವರಿಯವರೇ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಸಾಧ್ಯತೆ ಇದೆ. ಈ ನಡುವೆ ಜಿಲ್ಲಾಡಳಿತ ಘಟನೆಯ ಕುರಿತು ನ್ಯಾಯಾಂಗ ತನಿಖೆ ನಡೆಸಲು ಆದೇಶಿಸಿದೆ.

ಭಾನುವಾರ ರಜಾ ದಿನದಂದು ಅಕಾರಿಗಳು ತಮ್ಮ ಪ್ರಭಾವ ಹಾಗೂ ದರ್ಪ ಬಳಸಿ ಸಫಾರಿ ನಡೆಸಿದ್ದಾರೆ. ಅಧಿಕಾರಿಗಳಲ್ಲಿ ಒಬ್ಬರು ಸಫಾರಿ ಜೀಪಿನ ಬಾನೆಟ್ ಮೇಲೆ ಕುಳಿತು ಸಿಗರೇಟ್ ಸೇದಿದರು, ಇತರರು ವಾಹನಗಳಿಂದ ಇಳಿದಿದ್ದಾರೆ. ಈ ಎರಡು ಕ್ರಮಗಳು ಸಂರಕ್ಷಿತ ಅರಣ್ಯದೊಳಗೆ ನಿಷೇಧಿತವಾಗಿವೆ.

ಬಿಎಸ್‍ವೈ-ಮೋದಿ ಗೌಪ್ಯ ಮಾತುಕತೆ, ರಾಜ್ಯ ಬಿಜೆಪಿಯಲ್ಲಿ ಸಂಚಲನ

ಆಯುಕ್ತರ ಮಟ್ಟದ ಅಧಿಕಾರಿ, ಅವರೊಂದಿಗೆ ಬಂದಿದ್ದ ಇತರ ಅಧಿಕಾರಿ ಮಿತ್ರರು, ಕುಟುಂಬದ ಸದಸ್ಯರು ಅಭಯಾರಣ್ಯದೊಳಗೆ ಜೀಪ್‍ನಿಂದ ಕೆಳಗೆ ಇಳಿದು ಓಡಾಡಿದ್ದಾರೆ. ರಕ್ಷಿತಾರಣ್ಯದಲ್ಲಿ ಈ ರೀತಿ ನಡವಳಿಕೆ ಶಿಕ್ಷಾರ್ಹ ಅಪರಾಧವಾಗಿದೆ.

ಜೀಪ್ ಚಾಲಕರು ಮತ್ತು ಇತರ ಸಿಬ್ಬಂದಿ ಅಧಿಕಾರಿಗಳು ಮತ್ತು ಅವರ ಬಳಗ ನಿಯಮ ಉಲ್ಲಂಘಿಸುವುದನ್ನು ತಡೆಯಲು ಪ್ರಯತ್ನಿಸಿದೆ. ಆದರೆ ಅಧಿಕಾರಿಗಳು ಸಿಬ್ಬಂದಿಗಳನ್ನು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಪೊಬಿತೋರಾ ವನ್ಯಜೀವಿ ಅಭಯಾರಣ್ಯದ ಜೀಪ್ ಸಫಾರಿ ಮಾಲೀಕರ ಸಂಘ ಆರೋಪಿಸಿದ್ದು, ಘಟನೆಯ ಕುರಿತು ತನಿಖೆ ನಡೆಸುವಂತೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಪತ್ರ ಬರೆದಿದೆ.

ಅಧಿಕಾರಿಗಳು ಮತ್ತು ಅವರ ಕುಟುಂಬದ ಸದಸ್ಯರ ನಡವಳಿಕೆಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಆ ದೃಶ್ಯಾವಳಿಗಳನ್ನು ಸ್ಥಳೀಯ ಚಾನೆಲ್‍ಗಳು ತೋರಿಸಿವೆ. ದೃಶ್ಯಾವಳಿಯಲ್ಲಿ ಒಬ್ಬ ವ್ಯಕ್ತಿ ಜೀಪ್‍ನ ಬ್ಯಾನೆಟ್ ಮೇಲೆ ಕುಳಿತು ಸಿಗರೇಟ್ ಸೇದುವುದು ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಹೇಳಲಾಗಿದೆ. ಆದರೂ ಸಿಸಿಟಿವಿ ದೃಶ್ಯಾವಳಿಗಳ ನಿಖರತೆ ಬಗ್ಗೆ ದೃಢಿಕರಣವಾಗಬೇಕಿದೆ.

23 ಲಕ್ಷ ಹೋಟೆಲ್ ಬಿಲ್ ಪಾವತಿಸದೆ ಪರಾರಿಯಾದ ರಾಜಮನೆತನದ ಉದ್ಯೋಗಿ

ಈ ಕುರಿತು ಮ್ಯಾಜಿಸ್ಟ್ರೇಟ್ ಮಟ್ಟದ ತನಿಖೆಗೆ ಜಿಲ್ಲಾಕಾರಿ ಆದೇಶಿಸಿದ್ದಾರೆ. ಒಂದು ವೇಳೆ ಆರೋಪಗಳು ನಿಜವಾಗಿದ್ದರೆ, ನಿಯಮ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾನೂನುಗಳ ಅಡಿ ಕ್ರಮ ಜರುಗಿಸುವುದಾಗಿ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Assam, bureaucrats, flout rules, Pobitora,

Articles You Might Like

Share This Article